ಜಾತಿ ಗಣತಿ ಜಾರಿಗೆಗೊಳಿಸುವಂತೆ ಒಕ್ಕೂಟ ಮನವಿ



ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಗಾಗಿ ಜಾತಿಗಣತಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಜಾರಿಗೊಳಿಸುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಜಿಲ್ಲಾಧಿಕಾರಿ ಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣ ಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣಿ ಸುವ ಅಗತ್ಯವಿಲ್ಲ. ಸುಮಾರು 159 ಕೋಟಿ ರೂ.ಗಳನ್ನು ಖರ್ಚು ಮಾಡಿ ತಯಾರಿಸಿರುವ ಈ ವರದಿಯು ತಕ್ಷಣ ಫಲಪ್ರದ ಆಗಬೇಕು.  

ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಹೇಳಿರುವುದು ಸ್ವಾಗತಾರ್ಹ. 

ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗದ ಅವಕಾಶಗಳು ಮತ್ತು ವಿದ್ಯಾಭ್ಯಾಸದ ಅವಕಾಶಗಳು ಲಭಿಸಿಲ್ಲ. ಅಹಿಂದ ವರ್ಗಗಳಲ್ಲಿ ಅರಿವು ಮತ್ತು ಸಂಘಟನೆಯ ಕೊರತೆಯ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ ಎನ್ನುವುದರ ಜೊತೆಗೆ ನಿರ್ಧಿಷ್ಟವಾಗಿ ಅವರ ಜನಸಂಖ್ಯಾ ಪರಿಸ್ಥಿತಿ ಗೊತ್ತಿಲ್ಲದಿರುವುದು ಪ್ರಮುಖ ಕಾರಣವಾಗಿದೆ. 

ಜಾತಿಗಣತಿಯ ವರದಿ ಬಂದರೆ ಜಾತಿಗಳ ವಸ್ತುಸ್ಥಿತಿ ತಿಳಿಯಲಿದೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಈಗ ರಾಜ್ಯದ ಸುಮಾರು ಆರುವರೆ ಕೋಟಿ ಜನಸಂಖ್ಯೆಯ ಅಧ್ಯಯನವಾಗಿರುವುದರಿಂದ ಜಾತಿ ಜನಗಣತಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲಾ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ಆಗಲಿದೆ. ಹಾಗಾಗಿ ಎಲ್ಲಾ ಜಾತಿಗಳು ಕೂಡ ಜಾತಿ ಜನಗಣತಿ ವರದಿ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಮೀಸಲಾತಿ ಪರಿಷ್ಕರಣೆ, ಜಾತಿಗಳನ್ನು ಹೊಸ ವರ್ಗಕ್ಕೆ ಸೇರಿಸುವುದು ಅಥವಾ ಕೈಬಿಡುವುದು ಎಲ್ಲಕ್ಕೂ ಸುಪ್ರೀಂಕೋರ್ಟ್ ಯಾವುದಾದರೂ ಸಾಂವಿಧಾನಿಕ ಸ್ಥಾನಮಾನ ಇರುವ ಆಯೋಗದ ದತ್ತಾಂಶವನ್ನು ಕೇಳುತ್ತದೆ. ಇದು ಮಂಡಲ್ ವರದಿ ಅನುಷ್ಟಾನವನ್ನು ಪ್ರಶ್ನಿಸಿದ್ದ ಅರ್ಜಿಯಿಂದ ಹಿಡಿದು ಹಲವಾರು ಪ್ರಕರಣಗಳಲ್ಲಿ ಕಂಡು ಬಂದಿದೆ. 

ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು. ಕೊಟ್ಟ ಮಾತಿನಂತೆ ಈಗ ಜಾತಿ ಜನಗಣತಿಯ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ ‘ನಾವು ನುಡಿದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು.  

ಅಕ್ಟೋಬರ್ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿಯ ವರದಿಯನ್ನು ಮಂಡಿಸಿದಾಗ, ಕೆಲವರು ಆಕ್ಷೇಪ ಎತ್ತಿ ಅದನ್ನು ಒಪ್ಪಬೇಕೋ, ಬೇಡವೋ ಎಂದು ನಿರ್ಧರಿಸುವ ಅಭಿಪ್ರಾಯ ಸಂಪುಟ ಸಭೆಯ ಅಧಿಕಾರ. ಆದರೆ ಸಂಪುಟ ಸಭೆಯಲ್ಲಿ ಮಂಡಿಸಬಾರದು ಎಂಬುದು ಗೂಂಡಾ ಪ್ರವೃತ್ತಿ, ಸರ್ವಾಧಿಕಾರಿ ಧೋರಣೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಜೊಳ್ಳು ಬೆದರಿಕೆಗೆ ತಲೆ ಕೆಡಿಸಿಕೊಳ್ಳದೆ ಸಿದ್ಧರಾಮಯ್ಯನವರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಆಗ್ರಹಿಸಲಾಗಿದೆ. 

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಇದೇ ಅಕ್ಟೋಬರ್ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ, ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆಗಾಗಿ ಒತ್ತಾಯಿಸಿ, ಅ. 16  ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ “ಹಕ್ಕೊತ್ತಾಯ ಸಮಾವೇಶ” ಆಯೋಜಿಸುತ್ತಿದ್ದೇವೆ, ಈ ಸಮಾವೇಶದಲ್ಲಿ ನಾಡಿನ ಶೋಷಿತ ಸಮುದಾಯಗಳ ಜನತೆ, ಸಂಘ ಸಂಸ್ಥೆಗಳು ಭಾಗವಹಿಸುವಂತೆ ಕೋರಲಾಗಿದೆ. 

 ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರುಗಳಾದ ಕೆ ರಂಗನಾಥ್, ಅಫ್ತಾಬ್ ಫಾರ್ವಿಜ್, ಎಸ್ಎಂ ಶರತ್, ಜಿ.ಡಿ ಮಂಜುನಾಥ್, ಎಂ ಪ್ರವೀಣ್ ಕುಮಾರ್, ಬಿ ಲೋಕೇಶ್ , ಜಗದೀಶ್, ಗುರುಪ್ರಸಾದ್, ಕೆ ಎಲ್ ಪವನ್, ಕೇಶವ, ಮಾಲ್ತೇಶ್ ,ವಿನೋದ್, ಪ್ರದೀಪ್, ವಿನಯ್ ಹಾಗೂ ಇತರರು ಇದ್ದರು*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close