ಜಿಲ್ಲಾಧಿಕಾರಿ ಕಚೇರಿಗೆ ಬರುವ ದ್ವಿಚಕ್ರ ವಾಹನ ಸವಾರರಿಗೆ ಪಾರ್ಕಿಂಗ್ ಶುಲ್ಕದ ಬಿಸಿ


ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಗಳಿಗೆ ಕೆಲಸಗಳ ನಿಮಿತ್ತ ವಾಹನಗಳಲ್ಲಿ ತೆರಳುವವರು ಇನ್ಮುಂದೆ ಪಾರ್ಕಿಂಗ್‌ಗೂ ಶುಲ್ಕ ಪಾವತಿಸುವುದು ಅನಿವಾರ್ಯ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಹುಶಃ ಸೋಮವಾರದಿಂದ ಈ ಶುಲ್ಕ ನಿಗದಿಯಾಗುವ ಸಾಧ್ಯತೆ ಇದೆ. ಆದರೆ ತಾಲೂಕು ಕಚೇರಿಯಲ್ಲಿ ಶುಲ್ಕದ ಪಾರ್ಕಿಂಗ್ ಚಾಲ್ತಿಯಲ್ಲಿದೆ. 

ಬೈಕ್‌ಗೆ 10 ರೂ, ತ್ರಿಚಕ್ರ ಅಥವಾ ನಾಲ್ಕು ಚಕ್ರದ ವಾಹನಕ್ಕೆ 20 ರೂ. ಶುಲ್ಕ ನಿಗದಿ ಮಾಡಲಾಗಿದೆ. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪರ ಮತ್ತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾರ್ಯ ನಿಮಿತ್ತ ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ ನೂರಾರು ಜನರು ಬಂದು ಹೋಗುತ್ತಾರೆ. ಪಕ್ಕದಲ್ಲೇ ಇರುವ ತಾಲೂಕು ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ಭೂ ಮಾಪನ ಕಚೇರಿ, ಆಹಾರ ಇಲಾಖೆ ಸೇರಿ ಹಲವು ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಬರುವುದು ಸಾಮಾನ್ಯ. ಆದರೆ ಏಕಾಏಕಿ ಡಿಸಿ ಕಚೇರಿ ಸಂಕೀರ್ಣದೊಳಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದ್ದು ಸಾರ್ವಜನಿಕರಿಗೆ ಬರೆ ಎಳೆದಂತಾಗಿದೆ.

ತಾಲೂಕು ಕಚೇರಿ ಕಟ್ಟಡದಲ್ಲಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್‌ಸಿ ಬಲ್ಕಿಷ್ ಬಾನು ಅವರ ಕಚೇರಿಗಳಿಗೆ ನಿತ್ಯವೂ ಜನರು ಬಂದು ಹೋಗುತ್ತಿದ್ದಾರೆ. ತಾಲೂಕು ಕಚೇರಿ ಎದುರು ಈಗಾಗಲೇ ಪಾರ್ಕಿಂಗ್ ಶುಲ್ಕ ನಿಗದಿ ಮಾಡುತ್ತಿದ್ದ ಕಾರಣಕ್ಕೆ ಅವರಲ್ಲಿ ಬಹುತೇಕ ಮಂದಿ ಡಿಸಿ ಕಚೇರಿ ಆವರಣದಲ್ಲೇ ವಾಹನಗಳ ಪಾರ್ಕಿಂಗ್ ಮಾಡಿ ಹೋಗುತ್ತಿದ್ದರು. ಈಗ ಇಲ್ಲಿಯೂ ಶುಲ್ಕ ವಿಧಿಸಲಾಗುತ್ತಿದೆ.

ರಸ್ತೆ, ಫುಟ್‌ಪಾತ್‌ನಲ್ಲೇ ಪಾರ್ಕಿಂಗ್: 

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಾರ್ಕಿಂಗ್ ಸ್ಥಳ ಬದಲಾವಣೆ ಮಾಡಿದ ಬೆನ್ನಲ್ಲೇ ವಾಹನ ಸವಾರರು ಫುಟ್‌ಪಾತ್ ಮತ್ತು ರಸ್ತೆ ಪಕ್ಕದಲ್ಲೇ ನಿಲುಗಡೆ ಮಾಡಿ ಕಚೇರಿಗಳಿಗೆ ಹೋಗುತ್ತಿದ್ದಾರೆ. ಸಣ್ಣಪುಟ್ಟ ಕೆಲಸಕ್ಕೆ ಬಂದರೂ ಡಿಸಿ ಕಚೇರಿ ಹಿಂದಕ್ಕೆ ತೆರಳಿ ಪಾರ್ಕಿಂಗ್ ಮಾಡಿ ಬರಬೇಕು. ಅಲ್ಲಿಯೂ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ.

ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ದಕ್ಕೆ ಕ್ರಮ

ಡಿಸಿ ಕಚೇರಿ ಸಂಕೀರ್ಣದಲ್ಲಿ ಸಾರ್ವಜನಿಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದರು. ಅಸಮರ್ಪಕವಾಗಿ ವಾಹನ ನಿಲುಗಡೆ ಮಾಡುತ್ತಿದ್ದ ಕಾರಣ ಕಚೇರಿ ಕಾರ್ಯನಿರ್ವಹಣೆಗೆ ಅನಾನುಕೂಲ ಉಂಟಾಗುತ್ತಿದೆ. ಅಲ್ಲದೆ, ಕೆಲ ಅಪರಿಚಿತರೂ ವಾಹನಗಳನ್ನು ನಿಲುಗಡೆ ಮಾಡಿ ಹೋಗುತ್ತಿದ್ದರು. ಇದು ಸರ್ಕಾರಿ ನೌಕರರು ಮತ್ತು ಸಿಬ್ಬಂದಿ ಸುರಕ್ಷತೆಗೆ ಧಕ್ಕೆ ಉಂಟಾಗುವ ಸಂಭವವಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಶುಲ್ಕ ವಿಧಿಸುವ ಮೂಲಕ ಸುಗಮ ಪಾರ್ಕಿಂಗ್‌ಗೆ ಕ್ರಮ ಕೈಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.

ಟೆಂಡರ್ ಕರೆದ ಜಿಲ್ಲಾಡಳಿತ

ಪಾರ್ಕಿಂಗ್‌ಗೆ ಜಿಲ್ಲಾಡಳಿತ ಈಗಾಗಲೇ ಟೆಂಡರ್ ಕರೆದಿದ್ದು ಶುಲ್ಕ ಸಂಗ್ರಹ ಪ್ರಕ್ರಿಯೆಯೂ ಆರಂಭಗೊಂಡಿದೆ. ಸರ್ಕಾರಿ ಕಚೇರಿಗಳಿಗೆ ಒಮ್ಮೆ ಬಂದರೆ ಕೆಲಸ ಆಗಿರುವ ಉದಾಹರಣೆ ಬಹಳ ಕಡಿಮೆ. ಹಾಗಾಗಿ ಬಂದಾಗಲೆಲ್ಲ ಪಾರ್ಕಿಂಗ್‌ಗೆ ಶುಲ್ಕ ಕೊಡಬೇಕಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close