ಸುದ್ದಿಲೈವ್/ಶಿವಮೊಗ್ಗ
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಫಸಲಿಗೆ ಬಂದ ಬೆಳೆಗಳನ್ನು ಕಾಡಾನೆಗಳು ಹಾಳು ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಕಾಡಾನೆಗಳನ್ನ ಸುರಕ್ಷಿತ ಜಾಗಕ್ಕೆ ಓಡಿಸಲು ಮುಂದಾಗಿದೆ.
ಶಿವಮೊಗಗ್ಗದ ಸಕ್ರೈಬೈಲು ಆನೆ ಬಿಡಾರದಿಂದ ಪುರದಾಳು ಗ್ರಾಮಕ್ಕೆ ಕಾಡಾನೆಗಳನ್ನ ಓಡಿಸುವ ಕಾರ್ಯಾಚರಣೆಗೆ ಆನೆಗಳು ಬಂದಿವೆ. ಮೂರು ಆನೆಗಳ ಮೂಲಕ ಅರಣ್ಯ ಇಲಾಖೆ ಕಾಡಾನೆಗಳನ್ನ ಸುರಕ್ಷಿತ ಜಾಗಕ್ಕೆ ಓಡಿಸಲು ಮುಂದಾಗಿದೆ.
ಶಿವಮೊಗ್ಗ ಪುರದಾಳು, ಬೇಳೂರು, ಮಲೇಶಂಕರ, ಆಲದೇವರ ಹಸೂರು, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿದ್ದವು. ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಅರಣ್ಯ ಇಲಾಖೆಯವರು ರಾತ್ರಿ ವೇಳೆ ಪಟಾಕಿ ಸಿಡಿಸಿ ತೋಟ,ಹೊಲಗಳಿಗೆ ನುಗ್ಗದಂತೆ ತೋರಿಕೆಯ ಕ್ರಮ ಕೈಗೊಳ್ಳುತ್ತಿದ್ದರು ಎಂಬುದು ಗ್ರಾಮಸ್ಥರ ಆರೋಪವಾಗಿತ್ತು. ಆದರೆ ಆನೆಗಳು ಮಧ್ಯರಾತ್ರಿ ವೇಳೆ ರೈತರ ಭತ್ತದ ಗದ್ದೆ,ಅಡಿಕೆ ಹಾಗೂ ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿ,ಬೆಳೆಗಳನ್ನು ನಾಶಪಡಿಸುತ್ತಿದ್ದವು.
ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ರೋಸಿ ಹೋಗಿದ್ದ ರೈತರು,ಕಾಡಾನೆ ಹಾವಳಿ ಖಂಡಿಸಿ ಡಿಸಿ ಕಛೇರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಅಲ್ಲದೇ ಅರಣ್ಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದ್ದರು.
ಸ್ಥಳೀಯರ ಆಕ್ರೋಶದ ಹಿನ್ನಲೆ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ಆಲೆ, ಬಹದ್ದೂರು, ಸೋಮಣ್ಣ ಮೂರು ಆನೆಗಳನ್ನ ಸಕ್ರಬೈಲಿನಿಂದ ಪುರುದಾಳುವಿಗೆ ತಂದು ಆನೆಗಳನ್ನ ಓಡಿಸುವ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.
ಇದರ ಮಧ್ಯೆ ಆಲದೇವರ ಹಸೂರಿನಲ್ಲಿ ಓರ್ವನ ರೈತನ ಪ್ರಾಣವನ್ನೂ ಈ ಕಾಡಾನೆಗಳು ಕಳೆದಿದ್ದವು. ಈಗ ಸಕ್ರೆಬೈಲಿನ ಮೂರು ಆನೆಗಳು ಪುರುದಾಳಿನಲ್ಲಿ ಕಾಡಾನೆಗಳನ್ನ ಕಾರ್ಯಾಚರಣೆಗೆ ಇಳಿದಿವೆ. ಈ ಭಾಗದಲ್ಲಿ 12 ಆನೆಗಳು ಇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಹೇಗೆ ಕಾರ್ಯಾಚರಣೆ ನಡೆಯಲಿದೆ? ಎಷ್ಟು ಆನೆಗಳನ್ನ ಕಾಡಿಗೆ ಹಿಮ್ಮಟ್ಟಿಸಲಾಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ.