ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು.

 ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಸರ್ಕಾರಿ ಅಧಿಕಾರಿ/ನೌಕರರು ಹಣದ ಆಮಿಷಕ್ಕೆ ಒಳಗಾಗುವುದರಿಂದ ದೂರವಿರುವುದು ಮಾತ್ರವಲ್ಲ, ತಮ್ಮ ವೃತ್ತಿಗೆ ಸಂಬಂಧಿಸಿದ ಮಾನದಂಡಗಳು, ಸಣ್ಣ ಸಣ್ಣ ವಿಷಯಗಳನ್ನು ಅರಿತು, ಸನ್ನಡತೆಯಿಂದ ಕರ್ತವ್ಯ ನಿರ್ವಹಿಸಬೇಕು. ವಿಜಿಲೆನ್ಸ್-ಜಾಗರೂಕರಾಗಿರುವುದು ಎಂದರೇನೆಂದು ಅರ್ಥ ಮಾಡಿಕೊಳ್ಳಬೇಕು. ಇಂದಿನ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಕುರಿತು ಅರಿತು, ಯಾವುದೇ ರೀತಿಯ ಸಂದೇಹಗಳಿದ್ದರೆ ಪ್ರಶ್ನಿಸಿ ಪರಿಹರಿಸಿಕೊಂಡು, ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು

 ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಕೆ.ಟಿ ಮಾತನಾಡಿ, ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಸೇವೆ, ಕರ್ತವ್ಯ ನಿರ್ವಹಣೆ ವೇಳೆ ತಮಗೆ ಅನ್ವಯಿಸುವ ನಿಯಮಾವಳಿಗಳಿಗೆ ಬದ್ದರಾಗಿರಬೇಕು. ತಮ್ಮ ಮಿತಿಗಳನ್ನು ಅರಿತು ಕರ್ತವ್ಯ ಅನುಷ್ಟಾನ ಮಾಡಬೇಕು.ಸರ್ಕಾರಿ ನೌಕರರು ಎಲ್ಲರಿಗೆ ಉತ್ತರದಾಯಿಯಾಗಿರುತ್ತಾರೆ. 

ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದಾಗ್ಯೂ ಕೆಲವೊಮ್ಮೆ ಕೆಲ ಆಪಾದನೆಗಳಿಗೆ ಗುರಿಯಾಗುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲವೋ ಲೋಪಗಳು ಆಗುವ ಸಂಭವ ಇರುತ್ತದೆ. ಆದ್ದರಿಂದ ನಮ್ಮ ಕರ್ತವ್ಯದ ಚೌಕಟ್ಟು, ಆಳ ಮತ್ತು ಮಿತಿಯನ್ನು ಅರಿತು ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಗೆ ಸಂಬAಧಿಸಿದ ಕಾಯ್ದೆ-ಕಾನೂನುಗಳ ಜ್ಞಾನ ಅತ್ಯಗತ್ಯ. ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾ, ತಮ್ಮ ಅಧೀನ ಅಧಿಕಾರಿ, ನೌಕರರಿಗೂ ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.

 ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಸರ್ಕಾರಿ ಅಧಿಕಾರಿ/ನೌಕರರು ಕಾನೂನಿನ ಚೌಕಟ್ಟು ಹಾಗೂ ಆತ್ಮಸಾಕ್ಷಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ಕಾಯ್ದೆ-ಕಾನೂನಿನ ಆಚೆ ಕೆಲವು ವಿವೇಚನಾ ಅಧಿಕಾರ ಚಲಾಯಿಸುವ ಸಂದರ್ಭ ಒದಗಿಬರುತ್ತದೆ. ಅದನ್ನು ಸಮರ್ಪಕವಾಗಿ, ನ್ಯಾಯಬದ್ದವಾಗಿ ನಿರ್ವಹಿಸಬೇಕು. ವಿವೇಚನಾ ಅಧಿಕಾರದ ದುರುಪಯೋಗ ಆದರೆ ಭ್ರಷ್ಟಾಚಾರ ಜರುಗುತ್ತದೆ. ಸರ್ಕಾರಿ ಅಧಿಕಾರಿ/ನೌಕರರು ಮಾಡುವ ಪ್ರತಿ ಕೆಲಸದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕರ್ತತ್ಯನಿಷ್ಟೆ ಇರಬೇಕೆಂದು ಅವರು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ನೀಡಿ ಮಾತನಾಡಿ, ನಾವೆಲ್ಲ ಲೋಕಾಯುಕ್ತ ಸಂಸ್ಥೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988 ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಅಡಿಯಲ್ಲಿ ತನಿಖೆ ಕೈಗೊಳ್ಳುತ್ತದೆ. ರಾಜ್ಯ ಅಧೀನವಾದ ನಿರ್ಣಯಗಳಿಗೆ ಸಂಬAಧಿಸಿದAತೆ ಲೋಕಯುಕ್ತ ತನಿಖೆ ಕೈಗೊಳ್ಳುತ್ತದೆ ಎಂದು ತಿಳಿಸಿದ ಅವರು ಈ ಎರಡು ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಎನ್. ಮೃತ್ಯುಂಜಯ ಲೋಕಾಯುಕ್ತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

 ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಂಜುನಾಥ್ ಚೌದರಿ ಎಂ.ಹೆಚ್ ವಹಿಸಿದ್ದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close