ನೆಲದ ನಿಜ ನಾಯಕ ಸಾರೇಕೊಪ್ಪ ಬಂಗಾರಪ್ಪ



ಸುದ್ದಿಲೈವ್/ಶಿವಮೊಗ್ಗ

ಸಾರೆಕೊಪ್ಪ ಬಂಗಾರಪ್ಪ ಈ ದೇಶ ಕಂಡ ಮುತ್ಸದ್ದಿ ರಾಜಕಾರಣಿ. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯ ವ್ಯಕ್ತಿತ್ವ ಅವರದ್ದು. ಈ ನೆಲದ ಹಸಿವು ಅರಿತಿದ್ದ ಅವರು, ಶ್ರಮಿಕರ ಬೆವರಿಗೆ ಯಾವತ್ತೂ ಗೌರವ ಕೊಡುತಿದ್ದರು. ಸಮಾಜವಾದಿ ಚಿಂತನೆಯ ಮೂಸೆಯಿಂದ ಹೊರಹೊಮ್ಮಿದ ರಾಜಕಾರಣಿಯಾಗಿದ್ದರಿಂದ ಅವರ ಇಡೀ ರಾಜಕೀಯ ಜೀವನ ಸಾಮಾಜಿಕ ನ್ಯಾಯದ ಪರಿಪಾಲನೆಯಲ್ಲಿಯೇ ಸಾಗಿದೆ. ಅವರ ರಾಜಕೀಯ ಯಾವತ್ತೂ ನೊಂದವರ ಪರವಾಗಿತ್ತು ಎಂಬುದಕ್ಕೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳೇ ಸಾಕ್ಷಿಯಾಗಿವೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸಾಮಾನ್ಯ ಗ್ರಾಮವಾದ ಕುಬಟೂರಿನಲ್ಲಿ ಹುಟ್ಟಿದ ಅವರು, ತಮ್ಮ ಅವಿರತ ಹೋರಾಟ, ಧೀಮಂತ ಚಿಂತನೆಯಿಂದಾಗಿ ದೇಶದ ರಾಜಕೀಯ ಭೂಪಟದಲ್ಲಿ ಶಾಶ್ವತವಾದ ಹೆಸರು ಉಳಿಸಿಕೊಂಡಿದ್ದಾರೆ.  ಸಮಾಜದಲ್ಲಿ ಅವಗಣನೆಗೆ ಒಳಗಾಗಿದ್ದ ಗೇಣಿದಾರರ ಮಗನಾಗಿ ಅದೇ ಗೇಣಿದಾರರನ್ನು ಭೂಮಿಯ ಮಾಲೀಕರನ್ನಾಗಿಸುವಲ್ಲಿ ಹೋರಾಟ ಮಾಡಿದರು. ಜಾತಿ ಸಂಕೋಲೆಯೊಳಗೆ ಸಿಲುಕಿಕೊಳ್ಳದೆ ಸರ್ವಜನಾಂಗದ ಪ್ರೀತಿಯ ಜನನಾಯಕರಾಗಿ ಈ ರಾಜ್ಯದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಸದಾ ಬಡವರ. ಧ್ವನಿಯಿಲ್ಲದವರ ಪರವಾಗಿದ್ದ ಬಂಗಾರಪ್ಪ ಅವರು ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಯೋಜನೆ ಅದೆಷ್ಟೊ ಗ್ರಾಮೀಣ ನಿರುದ್ಯೋಗಿಗಳ ಮನೆಯ ಜ್ಯೋತಿ ಬೆಳಗಿಸಿದೆ.

ಹತ್ತು ಹೆಚ್‌.ಪಿ. ಉಚಿತ ವಿದ್ಯುತ್‌ ಅನ್ನು  ರೈತರಿಗೆ ಕೊಡುವ ಮೂಲಕ ಕೃಷಿಕರ ಭೂಮಿಯನ್ನು ಸದಾ ಹಸಿರಾಗಿಸಿದ್ದರು. ಸೂರಿಲ್ಲದವರಿಗೆ ದಿಕ್ಕಾಗಿದ್ದ ಬಂಗಾರಪ್ಪ ಅವರು ಆಶ್ರಯ ಯೋಜನೆ ಮೂಲಕ ಇಂದಿಗೂ ನೆರಳಾಗಿದ್ದಾರೆ. ಅಕ್ಷಯ ಯೋಜನೆ ಅಶಕ್ತ ವಿದ್ಯಾರ್ಥಿಗಳ ಜ್ಞಾನದ ಜೋಳಿಗೆ ತುಂಬಿಸಿದೆ. ದೇವಳಕ್ಕೇ ಪ್ರವೇಶವಿಲ್ಲದ ಚಿಕ್ಕಪುಟ್ಟ ಸಮುದಾಯಗಳಿಗೆ ತಮ್ಮದೇ ಆರಾಧನೆಯ ಶಕ್ತಿದೇವತೆಗಳನ್ನು ಪೂಜಿಸಲು ನೆರವು ನೀಡುವ ಆರಾಧನಾ ಯೋಜನೆ ಜಾರಿ ಮಾಡುವ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ ಆಶಯವನ್ನು ಕೃತಿಗಿಳಿಸಿದ್ದ ಕೀರ್ತಿ ಸಾರೆಕೊಪ್ಪ ಬಂಗಾರಪ್ಪ ಅವರಿಗೆ ಸಲ್ಲುತ್ತದೆ.

ಮಲೆನಾಡಿಗೆ ಮಮತಾಮಯಿ:

ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸರ್ವಸಮುದಾಯಕ್ಕೆ ಎಸ್.ಬಂಗಾರಪ್ಪ ಅವರು ಒಂದು ರೀತಿಯ ಮಮತಾಮಯಿಯಾಗಿದ್ದರು. ಬಗರ್‌ ಹುಕುಂ ಕಾಯಿದೆ ತರುವ ಮೂಲಕ ಉಳುವವನೆ ಹೊಲದೊಡೆಯ ಕಾಯಿದೆಗೆ ಮತ್ತಷ್ಟು ಸತ್ವ ತುಂಬಿದ್ದರು. ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಹೆಸರಲ್ಲಿ ವಿಶ್ವವಿದ್ಯಾಲಯ,ಹಂಪಿ ಕನ್ನಡ ವಿವಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪನೆ ಮೂಲಕ ತಾವೊಬ್ಬ ಸಾಂಸ್ಕೃತಿಕ ನಾಯಕ ಎಂಬುದನ್ನೂ ಸಾಕ್ಷೀಕರಿಸಿದ್ದಾರೆ. ಕಾವೇರಿ ವಿವಾದ ಸಂದರ್ಭದಲ್ಲಿ ಅವರು ಹೊರಡಿಸಿದ್ದ ಸುಗ್ರೀವಾಜ್ಞೆಯಿಂದಾಗಿ  ಅವರೊಬ್ಬ ಕೆಚ್ಚೆದೆಯ ಕನ್ನಡಿಗ ಎಂಬುದನ್ನೂ ಈಗಲೂ ಸ್ಮರಿಸುವಂತಾಗಿದೆ.

ಹಸಿವು ಅರಿತ ನಿಜನಾಯಕ:

ಬಂಗಾರಪ್ಪ ಅವರು ತಮ್ಮ ಧೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರ ಅನುಭವಿಸಿದ್ದು ಅತ್ಯಲ್ಪ ಅವಧಿ ಮಾತ್ರ. ಮುಖ್ಯಮಂತ್ರಿಯಾಗಿ ಎರಡು ವರ್ಷಗಳಲ್ಲಿ ಕ್ರಾಂತಿಕಾರಿ ಯೋಜನೆ ಜಾರಿ ಮಾಡಿ ಜನಪ್ರೀತಿ ಗಳಿಸಿದ್ದರು. ಅಧಿಕಾರ ಇರಲಿ ಬಿಡಲಿ ಅವರು ಯಾವತ್ತೂ ಜನ ಸಮೂಹದೊಂದಿಗೆ ಇದ್ದವರು. ಅವರು ಸಂಸದರಾಗಿದ್ದ ಅವಧಿಯಲ್ಲಿ ಅವರ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದಲ್ಲಿ ಬಂದಿದ್ದ ಭೀಕರ ಬರಗಾಲದ ಹೊತ್ತಲ್ಲಿ ಜನರೊಂದಿಗೆ ನಿಂತಿದ್ದರು. ರೈತರಿಗೆ ಅಕ್ಕಿ ಭತ್ತ ವಿತರಣೆ ಮಾಡಿ ಹಸಿವು ನೀಗಿಸಿದ್ದರು. ರೈತರಿಗೆ ನೀಡಿದ್ದ ಬಿತ್ತನೆ ಬೀಜಗಳು ಮೊಳಕೆಯೊಡೆದು  ಹೊಲದಲ್ಲಿ ತೆನೆ ತೂಗಿ ಕಂಗೊಳಿಸಿದಾಗ ರೈತರ ಬಳಿ ಹೋಗಿ ನಾನಿದ್ದೇನೆ ಎಂದು ಸಾಂತ್ವನ ಹೇಳಿ ತಾಯ್ತನ ಮೆರೆದ ಬಂಗಾರಪ್ಪ ಒಬ್ಬ ಹೃದಯವಂತ ನಾಯಕ.

ಕಲಾವಿದ

ಈಗಿನ ರಾಜಕಾರಣಿಗಳು ಜನರ ನಡುವೆ ಕಲಾವಿದರಂತೆ ನಟಿಸುತ್ತಾರೆ. ಆದರೆ ಬಂಗಾರಪ್ಪ ಅವರೊಬ್ಬ ಅಪ್ಪಟ ಕಲಾವಿದರು. ಶಾಸ್ತ್ರೀಯ ಸಂಗೀತ ಕಲಿತಿದ್ದ ಅವರು ದೊಡ್ಡ ಸಂಗೀತ ಪ್ರೇಮಿ. ಆಂಗ್ಲ ಹಾಗೂ ಭಾರತೀಯ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು, ಈ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ಅತ್ಯಂತ ಪ್ರೀತಿಪಾತ್ರರಾದ ರಾಜಕಾರಣಿಯಾಗಿದ್ದರು. ಗ್ರಾಮೀಣ ಜಾನಪದ ಕಲೆಯನ್ನು ಪ್ರೀತಿಸುತಿದ್ದ ಅವರು, ಎಲ್ಲಿಯೇ ಡೊಳ್ಳು ಕುಣಿತ, ಜಾನಪದ ನೃತ್ಯಗಳಿದ್ದರೂ ತಾವೂ ಕಲಾವಿದರೊಂದಿಗೆ ಹೆಜ್ಜೆ ಹಾಕುತಿದ್ದರು. ದೇಶ ಕಂಡ ವರ್ಣರಂಜಿತ ರಾಜಕಾರಣಿ ಎಂಬ ಕೀರ್ತಿಹೊಂದಿದ್ದ ಬಂಗಾರಪ್ಪರಿಗೆ ಜನರೆಂದರೆ ಪ್ರಾಣ. ಜನರಿಂದ ಬೆಳೆದು, ಜನರಿಗಾಗಿ ದುಡಿದು ಮೇರು ವ್ಯಕ್ತಿತ್ವದಿಂದಾಗಿ ಜನರ ಹೃದಯ ಸಾಮ್ರಾಟರಾಗಿ ಚಿರಸ್ಥಾಯಿಯಾಗಿದ್ದಾರೆ.

ಬಂಗಾರ ಧಾಮ ಎಂಬ ಅಭಿಮಾನಧಾಮ


ಹೆತ್ತವರ ಮೇಲಿನ ಪ್ರೀತಿ ಗೌರವಕ್ಕೆ ಮಾದರಿಯಾಗಿ ಶ್ರವಣ ಕುಮಾರನನ್ನು ಪುರಾಣಗಳಲ್ಲಿ ನಾವು ಓದಿದ್ದೇವೆ. ಇತಿಹಾಸದಲ್ಲಿಯೂ ಅಂತಹ ಮಹಾನ್‌ ಪುರುಷರ ಬಗ್ಗೆ ಕೇಳಿದ್ದೇವೆ. ತಮ್ಮ ತಂದೆ -ತಾಯಿಯರನ್ನು ಅಭಿಮಾನದಿಂದ ಗೌರವಿಸುವ ಆರಾಧಿಸುವ ಅನೇಕರು ಅವರ ಸ್ಮರಣಾರ್ಥ ಗುಡಿಗಳನ್ನೂ ಕಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಈ ನಾಡಿನ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತಿರುವ ಸಾರೇಕೊಪ್ಪ ಬಂಗಾರಪ್ಪ ಮತ್ತು ಶಕುಂತಲಮ್ಮ ಅವರ ಸಮಾಧಿಸ್ಥಳವನ್ನು ಒಂದು ಅಭಿಮಾನದ ಮಂದಿರವಾಗಿ ನಿರ್ಮಿಸಲಾಗಿದೆ.

ಸೊರಬ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಈ ಬಂಗಾರಧಾಮ ಇಂದು ದೇಶದಲ್ಲಿಯೇ ಎಲ್ಲಿಯೂ ಇಲ್ಲದ ಒಂದು ಶಕ್ತಿಧಾಮವಾಗಿ ತಲೆ ಎತ್ತಿ ನಿಂತಿದೆ. ಅಗಲಿದ ಗಣ್ಯರ ಸ್ಮರಣಾರ್ಥ ನಿರ್ಮಿಸುವ ಸ್ಮಾರಕಗಳು ವರ್ಷಕ್ಕೊಮ್ಮೆ ಸ್ಮರಿಸುವ ತಾಣವಾಗಿರುವ ಈ ಸಂದರ್ಭದಲ್ಲಿ ನಿತ್ಯ ಚಟುವಟಿಕೆಯ ಕೇಂದ್ರವಾಗಿ ಒಂದು ಅದ್ಭುತ ಪ್ರವಾಸಿ ತಾಣವಾಗಿ ಬಂಗಾರಧಾಮ ರೂಪುಗೊಂಡಿದೆ.

ಸುಮಾರು ಒಂದು ಕಾಲು ಎಕರೆ ವಿಸ್ತಾರದಲ್ಲಿ ನಿರ್ಮಾಣ ಮಾಡಿರುವ ಬಂಗಾರಧಾಮವು ವಿಶೇಷ ವಿನ್ಯಾಸದೊಂದಿಗೆ ಜನಾಕರ್ಷಕವಾಗಿದೆ. ರಾಜ್ಯ ಕಂಡ ಮೇರು ನಾಯಕ ಸಾರೇಕೊಪ್ಪ ಬಂಗಾರಪ್ಪ ಮತ್ತು ಅವರ ಶ್ರೀಮತಿ ಶಕುಂತಲಮ್ಮ ಅವರ ಸಮಾಧಿ ಸ್ಥಳವು 100×100 ಅಡಿ ವಿಸ್ತಾರವಾಗಿದೆ. ಗ್ರಾನೈಟ್‌ ಮತ್ತು ಮಾರ್ಬಲ್ಸ್ ಗಳ ಹೊದಿಕೆ ಹೊಂದಿರುವ ಸಮಾಧಿಯ ಮೇಲ್ಚಾವಣಿ ಒಂದು ಅದ್ಭುತ ಕಲಾಕೃತಿಯಂತೆ ರಚಿತವಾಗಿದೆ.

ಸುಂದರ ಉದ್ಯಾನವನ, ಸುತ್ತಲೂ ವಾಕಿಂಗ್‌ ಪಾಥ್‌, ಚಿತ್ತಾಕರ್ಷಕ ಹೂವಿನ ತೋಟ, ಅಲಂಕಾರಿಕ ಗಿಡಗಳು. ಬಂಗಾರಪ್ಪರಿಗೆ ಅತ್ಯಂತ ಪ್ರಿಯವಾಗಿ ಕಲ್ಪವೃಕ್ಷ, ಈಚಲು ಮರ, ಸಂಪಿಗೆ ಮರ ಸೇರಿದಂತೆ ಒಂದು ಸುಂದರ ವನರಾಶಿಯೇ ಅವರ ಅಭಿಮಾನಿಗಳನ್ನು ಕೈಬೀಸಿ ಕರೆಯುವಂತಿದೆ. ಇಡೀ ಜೀವನದಲ್ಲಿ ಬರೀ ತಾಯ್ತನದ ರಾಜಕಾರಣ ಮಾಡಿದ ಬಂಗಾರಪ್ಪರ ಹೃದಯ ವೈಶಾಲ್ಯತೆಗೆ ತಕ್ಕಂತೆ ಬಂಗಾರಧಾಮ ನಿರ್ಮಾಣ ಮಾಡಲಾಗಿದೆ. ವಿಶೇಷ ವಿದ್ಯುದಲಂಕಾರ, ಆಕರ್ಷಕ ಸಂಗೀತ ಕೇಳುಗರನ್ನು ಭಾವನಾಲೋಕಕ್ಕೆ ಕೊಂಡೊಯ್ಯುತ್ತದೆ. 56 ಅಡಿ ಎತ್ತರದ ಕ್ಲಾಕ್‌ ಟವರ್‌ ವಿಶೇಷವಾಗಿದೆ.

ಬಯಲುರಂಗಮಂದಿರ:

ಸುರಭಿ ನಾಡು ಸೊರಬದಲ್ಲಿ ಸಾಹಿತ್ಯ , ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಆಧುನಿಕ ಶೈಲಿಯ ಬಯಲು ರಂಗಮಂದಿರ ಬಂಗಾರ ಧಾಮದಲ್ಲಿದೆ. ಏಕ ಕಾಲದಲ್ಲಿ 1500 ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಹೆಲಿಫ್ಯಾನ್‌ ಅಳವಡಿಸಿದ್ದು, ಬಂಗಾರಧಾಮದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಿದೆ.

ದೇಶದಲ್ಲಿಯೇ ಮಾದರಿಯಾಗಿರುವ ಬಂಗಾರಧಾಮದಲ್ಲಿ ಧ್ಯಾನಮಂದಿರ ಕೂಡಾ ಇದ್ದು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೂ ಇದೆ.

ಅಪ್ಪನ ಅಭಿಮಾನದ ನೆಲೆ:

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ನಾಡಿನುದ್ದಗಲಕ್ಕೂ ಯಾವ ಪರಿಯ ಅಭಿಮಾನಿಗಳಿದ್ದಾರೆ ಎಂಬುದನ್ನು ಅರಿತಿರುವ ಪುತ್ರ ಎಸ್‌.ಮಧುಬಂಗಾರಪ್ಪ ಅವರು, ತಂದೆಯ ಅಭಿರುಚಿಗೆ ತಕ್ಕಂತೆ ಬಂಗಾರಧಾಮ ನಿರ್ಮಿಸಿದ್ದಾರೆ. ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಧಾಮ ಮುಂದೆ ಜನಾಕಾರ್ಷಕ ಪ್ರವಾಸಿ ತಾಣವಾಗಲಿದೆ. ಸರ್ಕಾರವೇ ನಿರ್ಮಾಣ ಮಾಡಬೇಕಿದ್ದ ಸ್ಮಾರಕವನ್ನು ಮಧುಬಂಗಾರಪ್ಪ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಸರಕಾರ ಅನುದಾನ ಕೊಡುತ್ತೇನೆ ಎಂದರೂ ಅದನ್ನು ನಿರಾಕರಿಸಿ ಕೋಟ್ಯಂತರ ರೂ. ವ್ಯಯಿಸಿ ಬಂಗಾರಧಾಮ ನಿರ್ಮಾಣ ಮಾಡಿದ್ದಾರೆ. ಬಂಗಾರಪ್ಪ ಚಿಂತನೆ, ಅಭಿರುಚಿ, ಜನಸಮೂಹದೊಂದಿಗೆ ಅವರಿಗಿದ್ದ ಬಾಂಧವ್ಯಕ್ಕೆ ತಕ್ಕಂತೆ ನಿರ್ಮಾಣವಾಗಿರುವ ಬಂಗಾರಧಾಮ. ಜನನಾಯಕನ ಮೇಲಿನ ಅಭಿಮಾನದ  ದ್ಯೋತಕದಂತೆ ಭಾಸವಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close