ಸುದ್ದಿಲೈವ್/ಶಿವಮೊಗ್ಗ
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.
ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಏಕವಚನ ಹಾಗೂ ಕೆಟ್ಟ ಪದಗಳನ್ನು ಬಳಸಿ ಪತ್ರ ಬರೆದು ದರ್ಪ ತೋರಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಜಿಲ್ಲಾ ಜೆಡಿಎಸ್ ತೀವ್ರವವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಚಂದ್ರಶೇಖರ್ ಅವರ ವಿರುದ್ಧ ಹಲವು ದೂರು ದಾಖಲಾಗಿವೆ. ಭ್ರಷ್ಟಾಚಾರದ ಆರೋಪಗಳೂ ಇವೆ. ಪತ್ನಿಯ ಹೆಸರಲ್ಲಿ ರಾಜಕಾಲುವೆ ಮೇಲೆ ಬಹುಮಹಡಿ ವಾಣಿಜ್ಯ ಕಟ್ಟಡ ಕಟ್ಟಿದ್ದಾರೆ. ಭೂ ವ್ಯವಹಾರವೊಂದರಲ್ಲಿ 20 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕು. ಕೂಡಲೇ ಲೋಕಾಯುಕ್ತ ವಿಶೇಷ ತನಿಖಾ ದಳದಿಂದ ಅವರನ್ನು ಅನರ್ಹಗೊಳಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಗೀತಾ ಸತೀಶ್, ರಾಕೇಶ್ ಡಿಸೋಜ, ರಾಮಕೃಷ್ಣ, ನಿಖಿಲ್, ದಾದಾಪೀರ್, ದಾನೇಶಪ್ಪ, ಮಧುಕುಮಾರ್, ಓಂಕಾರಪ್ಪ ಕೆ.ಪಿ. ಸೇರಿದಂತೆ ಹಲವರಿದ್ದರು.