ಸುದ್ದಿಲೈವ್/ಶಿವಮೊಗ್ಗ
ತಾಲ್ಲೂಕಿನ ಪುರದಾಳು, ಅಗಸವಳ್ಳಿ, ತಮ್ಮಡಿಹಳ್ಳಿ, ಸಿರಿಗೆರೆ, ಬೆಳ್ಳೂರು,ಅರಸಾಳು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಕಾಡಾನೆ ಉಪಟಳ ಹೆಚ್ಚಾಗಿದೆ. ಅದೇ ರೀತಿ ಇಲ್ಲಿನ ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ೫೦ ವರ್ಷಗಳಿಗಿಂತಲೂ ಹಿಂದಿನಿಂದ ಸಾಗುವಳಿ ಮಾಡಿಕೊಂಡು ಮನೆ-ಮಠ ಮಾಡಿಕೊಂಡಿರುವ ರೈತರಿಗೆ ಅರಣ್ಯ ಇಲಾಖೆ ಒತ್ತುವರಿ ತೆರವಿನ ಹೆಸರಲ್ಲಿ ನೋಟಿಸ್ ನೀಡುತ್ತಿದೆ. ಆದ್ದರಿಂದ ಇಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಬೇಕು ಹಾಗೂ ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್‌ಗೆ ನೀಡದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ಪುರದಾಳು ಸುತ್ತಮುತ್ತಲ ಗ್ರಾಮಸ್ಥರು ಮಂಗಳವಾರ ಇಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ವ್ಯಾಪ್ತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಎರಡು ಜೀವ ಹಾನಿ ಹಾಗೂ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಇತ್ತೀಚೆಗೆ ಶಿವಮೊಗ್ಗ ತಾಲ್ಲೂಕು ಪುರದಾಳು ಗ್ರಾಮದ ಸುತ್ತಲ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಪುಂಡಾಟಿಕೆ ಅತಿಯಾಗಿದೆ. ೫ ರಿಂದ ೬ ಆನೆಗಳಿರುವ ತಂಡ ರಾತ್ರಿ-ಹಗಲು ಎನ್ನದೆ ಜನವಸತಿ ಪ್ರದೇಶಗಳತ್ತ ದಾಳಿ ಮಾಡುತ್ತಿವೆ. ಪುರದಾಳು ಪಂಚಾಯಿತಿ ವ್ಯಾಪ್ತಿಯ ಆಲದೇವರ ಹೊಸೂರು ಗ್ರಾಮದಲ್ಲಿ ಹನುಮಂತಪ್ಪ ಎಂಬ ರೈತರನ್ನು ತುಳಿದು ಸಾಯಿಸಿದೆ. ಕಳೆದ ವರ್ಷ ಬರಗಾಲದಿಂದ ಸಂಕಷ್ಟ ರೈತರು ಸಂಕಷ್ಟ ಅನುಭವಿಸಿದ್ದಾರೆ. ಈ ಬಾರಿ ಅತೀವೃಷ್ಠಿಯಿಂದಲೂ ತೊಂದರೆಯಾಗಿದೆ. ಈ ನಡುವೆ ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ, ಶುಂಠಿ, ಕಬ್ಬು, ಭತ್ತ , ಬಾಳೆ ಹಾಗೂ ಅಡಕೆ ತೋಟಗಳಿಗೆ ನುಗ್ಗುತ್ತಿವೆ. ಬದುಕಿಗೆ ಆಸರೆಯಾಗಬೇಕಿರುವ ಬೆಳೆಯನ್ನು ನಾಶ ಮಾಡುತ್ತಿವೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಿಂದ ಆನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೆ.೨೫ ರಂದು ಪುರದಾಳು ಗ್ರಾಮದ ಶರಾವತಿ ಮುಳುಗಡೆ ರೈತರ ಕುಟುಂಬಕ್ಕೆ ಒತ್ತುವರಿ ತೆರವು ಮಾಡಲು ನೋಟಿಸ್ ನೀಡಲಾಗಿದೆ. ಹನುಮಂತಾಪುರ ಸ.ನಂ.೭ ರಲ್ಲಿ ೩ ಎಕರೆ ಜಾಗದಲ್ಲಿ ಐದು ಮಂದಿ ರೈತರ ಸಾಗುವಳಿ ಮಾಡಿಕೊಂಡಿದ್ದರೂ ೨೦ ವರ್ಷಗಳ ಹಿಂದಿನ ಆದೇಶ ಮುಂದಿಟ್ಟುಕೊಂಡು ತೆರವು ಮಾಡಲು ಸೂಚನೆ ನೀಡಿದೆ. ತಮ್ಮ ಸರ್ಕಾರ ಸಣ್ಣ ಹಿಡುವಳಿದಾರರ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಆದರೂ ಅರಣ್ಯ ಇಲಾಖೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಕಂದಾಯ ಭೂಮಿ ಎಂದು ಸಾಗುವಳಿ ಮಾಡಿಕೊಂಡಿದ್ದ ಭೂಮಿಯನ್ನು ಬ್ರಿಟಿಷರ ಕಾಲದ ಸರ್ಕಾರಿ ಆದೇಶ ಮುಂದಿಟ್ಟುಕೊಂಡು ಕಿರು ಅರಣ್ಯ ಎಂದು ಮ್ಯುಟೇಷನ್ ಬದಲು ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಈ ದಬ್ಬಾಳಿಕೆ ನಿಲ್ಲಬೇಕು ಮತ್ತು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಾಪುರ ಸ.ನಂ.೭ರ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಎಂ.ಡಿ.ರವಿಕುಮಾರ, ಜಗದೀಶ, ಕಾಗರ್ಸೆ ತಿಮ್ಮಪ್ಪ, ಬಸವರಾಜ ಇದ್ದರು.