Girl in a jacket

ಮಲೆನಾಡಿನಾದ್ಯಂತ ಸಂಭ್ರಮದ ಭೂಮಿ ಹುಣ್ಣಿಮೆ ಆಚರಣೆ

ಬುತ್ತಿ ಹೊತ್ತುಕೊಂಡು ಭೂಮಿ ಹುಣ್ಣಿಮೆಯಲ್ಲಿ ಭಾಗಿಯಾದ ಮಗು ಕ್ಷಿತಿ ಸಾಹಿತ್ಯ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನ ರೈತಾಪಿ ಸಮುದಾಯದ ಅತೀ ಮುಖ್ಯ ಹಬ್ಬ ಭೂಮಿ ಹುಣ್ಣಿಮೆ. ದಸರಾ ಕಳೆದು ವಾರದೊಳಗೆ ಬರುವ ಹುಣ್ಣಿಮೆಯಂದು ಭೂಮಿಗೆ ಪೂಜೆ ಸಲ್ಲಿಸುವ ಕ್ರಮ ಮಲೆನಾಡಿನಲ್ಲಿ ವಿಶಿಷ್ಟ. ಜಿಲ್ಲೆಯಾದ್ಯಂತ ರೈತರು ಹಬ್ಬವನ್ನ ಸಂಭ್ರಮದಿಂದ ಆಚರಿಸಿದರು.  

ಹಿಂದಿನ ದಿನ ಸಂಜೆಯೇ ಹಬ್ಬಕ್ಕೆ ತಯಾರಿ ನಡೆದು ಮರು ದಿನ ಬೆಳಗ್ಗೆ ಭೂಮಿ ಪೂಜೆ ಹಾಗೂ ಗದ್ದೆ-ತೋಟದಲ್ಲಿ ಭೋಜನದ ಮೂಲಕ ಹಬ್ಬ ಕೊನೆಗೊಳ್ಳಲಿದೆ. ಜಿಲ್ಲೆಯಲ್ಲಿ ಹಬ್ಬದಾಚರಣೆ ಭಿನ್ನವಾಗಿದ್ದರೂ ಸಹ ಪೂಜೆಯ ರೀತಿ ನೀತಿ ಮಾತ್ರ ಎಲ್ಲಕಡೆ ಬಹುತೇಕ ಒಂದೇ ಆಗಿರುತ್ತದೆ.  

ವಿಶೇಷವಾಗಿ ಕೆಲವು ಸಮುದಾಯಗಳು ಭೂಮಿ ಹುಣ್ಣಿಮೆ ಬುಟ್ಟಿಯಲ್ಲೇ ತಿನಿಸುಗಳನ್ನ ಹೊಲ-ಗದ್ದೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ, ಭೂಮಿ ಹುಣ್ಣಿಮೆ ದಾರ ಮನೆಯ ಸದಸ್ಯರು ಕಟ್ಟಿಕೊಂಡು, ಹೊಲದಲ್ಲೇ ಕಂಬಳಿ ಹಾಸಿ ಊಟ ಮಾಡಿಕೊಂಡು ಮನೆಗೆ ಬರುತ್ತಾರೆ. ಇನ್ನು ಕೆಲವರು ಸರಳ ಪೂಜೆಯನ್ನ ನೆರವೇರಿಸುತ್ತಾರೆ. 

ಭೂಮಿ ಹುಣ್ಣಿಮೆ ಬುಟ್ಟಿ ಆಚರಣೆ ಇರುವವರು ಹಿಂದಿನ ದಿನ ಚರಗ ಎಂಬ ಪದಾರ್ಥವನ್ನ ತಯಾರು ಮಾಡುತ್ತಾರೆ. ವಿವಿಧ ತರಕಾರಿ, ಸೊಪ್ಪು ಹಾಕಿ ಕುದಿಸಿದ ಪದಾರ್ಥವನ್ನ ಮರು ದಿನ ಬೆಳಗ್ಗೆ ಸೂರ್ಯೋದಯದ ಮುನ್ನ ಹೊಲಗಳಿಗೆ ಬೀರುತ್ತಾರೆ. ಈ ಹಬ್ಬ ಸೀಮಂತದ ತರಹ ಆಚರಿಸಲಾಗುತ್ತೆ. 

ಭತ್ತದ ಗದ್ದೆಗಳಿಗೇ ಮೀಸಲಾಗಿದ್ದ ಆಚರಣೆ, ಗದ್ದೆಗಳು ಮಾಯವಾದಂತೆ ಅಡಕೆ ತೋಟಗಳಿಗೆ ವಿಸ್ತರಿಸಿಕೊಂಡು ಆಚರಣೆಯಲ್ಲಿ ಕೆಲ ಮಾರ್ಪಾಡುಗಳು ಬಂದಿವೆ. ಆದರೆ ಎಷ್ಟೇ ಹೊಲ ಇರಲಿ ರೈತರು ಈ ಹಬ್ಬವನ್ನ ಚಾಚೂ ತಪ್ಪದೇ ಮಾಡುತ್ತಾರೆ. 

ಭತ್ತ, ಅಡಕೆ, ಶುಂಠಿ ಸೇರಿ ಎಲ್ಲಾ ಬೆಳೆಗಳೂ ಸಹ ಫಲ ಹೊತ್ತು ನಿಂತ ಸಮಯ ಇದು. ಆದರೆ ಮುಂಗಾರು ಮಳೆ ಬೆಳೆಗಳಿಗೆ ಈ ವರ್ಷ ಅನುಕೂಲವಾದರೂ ಸಹ ಹಿಂಗಾರು ಆರಂಭ ಮುನ್ನ ರೈತರನ್ನ ನಿದ್ದೆಗೆಡಿಸಿದೆ. 

ಹವಾಮಾನ ವೈಪರೀತ್ಯಕ್ಕೆ ಭತ್ತ, ಶುಂಠಿ, ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆ ಫಲಿಸದ ಆತಂಕವಿದ್ದರೂ ಸಹ ಮಲೆನಾಡಿನ ರೈತರು ಸಂಭ್ರಮದಿಂದ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು. ಅಲ್ಲಲ್ಲಿ ಮುಂಜಾನೆ ಮಳೆಯೂ ಕೂಡ ಮೈ ನೆನೆಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು