ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರೈತರಿಗೆ ಬೆಳೆ ಸಾಲ ನೀಡುವ ಸಂಬಂಧ ನಬಾರ್ಡ್‌ನಿಂದ ನೀಡಲಾಗುವ ಪುನರ್ಧನ ಸೌಲಭ್ಯದ ಮಿತಿಯನ್ನು ಕಡಿತಗೊಳಿಸಿರುವುದನ್ನ ಖಂಡಿಸಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ ಡಿಸಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ಡಿಸಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ
ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯಲ್ಲಿ ರೈತರಿಗೆ ಬೆಳೆ ಸಾಲ ನೀಡುವ ಮಿತಿಯನ್ನು ರೂ.5 ಲಕ್ಷದವರೆಗೆ ಹಾಗೂ ಶೇ3ರ ಮಧ್ಯಮಾವಧಿ ಸಾಲದ ಮಿತಿಯನ್ನು ರೂ. 15-00 ಲಕ್ಷಗಳವರೆಗೆ ಹೆಚ್ಚಿಸಿರುವುದಕ್ಕೆ ರಾಜ್ಯ ಸರ್ಕಾರವನ್ನ ಅಭಿನಙದಿಸಿರುವ ಒಕ್ಕೂಟ ರಾಜ್ಯದ ರೈತರ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ಬ್ಯಾಂಕ್ ಗಳಿಗೆ ನೀಡಲಾಗುತ್ತಿರುವ ನಬಾರ್ಡ್‌ನ ಪುನರ್ಧನ ಸೌಲಭ್ಯವನ್ನು ಹೆಚ್ಚಿಸುವಂತೆ ನಬಾರ್ಡ್ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.
ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯ ರೈತರಿಗೆ ಬೆಳೆ ಸಾಲವನ್ನು ನೀಡುತ್ತಾ ಬರುತ್ತಿದೆ. ಜಿಲ್ಲೆಯ ಸುಮಾರು 1.20 ಲಕ್ಷಗಳಿಗೂ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯವನ್ನು ನೀಡಿ ಜಿಲ್ಲೆಯ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಿರುವ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಗೆ ಜಿಲ್ಲೆಯ ರೈತರು ಋಣಿಯಾಗಿರುತ್ತಾರೆ.
ಆದರೆ, ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳು ಮತ್ತು ಇತರೆ ಕೃಷಿ ಪರಿಕರಗಳ ಬೆಲೆಯು ವಿಪರೀತ ಜಾಸ್ತಿಯಾಗಿದ್ದು ಕಳೆದ ವರ್ಷ ಅನಾವೃಷ್ಟಿ ಮತ್ತು ಪ್ರಸಕ್ತ ಸಾಲಿನ ಅತೀವೃಷ್ಟಿಯಿಂದಾಗಿ ರೈತರು ತೀವ್ರ ಸಂಕಷ್ಟವನ್ನು ಎದರಿಸುತ್ತಿದ್ದಾರೆ. ಅಲ್ಲದೆ, ಕೊಳೆರೋಗ ಹಾಗೂ ಚುಕ್ಕೆರೋಗಗಳಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿರುತ್ತಾರೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸ್ಥಿರವಾದ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ. ಈ ರೋಗಗಳಿಗೆ ಇದುವರೆಗೂ ಶಾಶ್ವತವಾದ ಪರಿಹಾರ ದೊರೆತಿರುವುದಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ರೈತರು ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ಹಾಗೂ ರಿಯಾಯಿತಿ ಬಡ್ಡಿ ದರದಲ್ಲಿ ಮಧ್ಯಮಾವಧಿ ಸಾಲವನ್ನು ಪಡೆಯಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕನ್ನೇ ಅವಲಂಬಿಸಿರುತ್ತಾರೆ. ಇದುವರೆಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಬಾರ್ಡ್ ನಿಂದ ರೈತರಿಗೆ ಬೆಳೆ ಸಾಲ ನೀಡಲು ಕಡಿಮೆ ಬಡ್ಡಿದರದಲ್ಲಿ ಮನರ್ಧನ ಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ರೈತರಿಗೆ ಸಾಲ ನೀಡಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಸಂಪನ್ಮೂಲದ ಕೊರತೆ ಆಗುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ನಬಾರ್ಡ್‌ನವರು ಜಿಲ್ಲಾ ಬ್ಯಾಂಕ್‌ಗಳಿಗೆ ನೀಡುವ ಪುನರ್ಧನ ಸೌಲಭ್ಯವನ್ನು ಗಣನೀಯವಾಗಿ ಕಡಿತಗೊಳಿಸಿರುತ್ತದೆ ಎಂದು ಮನವಿಯಲ್ಲಿ ಆರೋಪಿಸಿದೆ.
ಪುನರ್ಧನ ಸೌಲಭ್ಯದ ಈ ಹಿಂದೆ ಇದ್ದ ಶೇ.40 ರಿಂದ 2024-25 ನೇ ಸಾಲಿಗೆ ಶೇ.10ಕ್ಕೆ ಕಡಿತಗೊಳಿಸಲಾಗಿದೆ. ಕಳೆದ 05 ವರ್ಷದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಬಾರ್ಡ್ ಮಂಜೂರು ಮಾಡಿರುವ ಅಲ್ಪಾವಧಿ ಕೃಷಿ ಸಾಲದ ಮಿತಿಯು ಕಡಿಮೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆದ್ದರಿಂದ ರಾಜ್ಯದ ರೈತರ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾ ಬ್ಯಾಂಕ್ ಗಳಿಗೆ ನೀಡಲಾಗುತ್ತಿರುವ ನಬಾರ್ಡ್‌ನ ಪುನರ್ಧನ ಸೌಲಭ್ಯವನ್ನು ಹೆಚ್ಚಿಸುವಂತೆ ನಬಾರ್ಡ್ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.
ರಾಜ್ಯ ಸಹಕಾರಿ ನಾಯಕರು ಡಾ ಆರ್ ಎಂ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯ 170 ಸಹಕಾರ ಸಂಘಗಳ ಪರವಾಗಿ ಅಧ್ಯಕ್ಷರು ಸದಸ್ಯರು ಭಾಗಿಯಾಗಿದ್ದರು.