ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿದ್ದಾಗ ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವ ಡಾ. ಎಚ್.ಎಸ್.ಭೋಜ್ಯಾನಾಯ್ಕ ಅವರನ್ನು ರಾಜ್ಯ ಸರ್ಕಾರ ಕೆಪಿಎಸ್‌ಸಿ(ಕರ್ನಾಟಕ ಲೋಕಸಭಾ ಆಯೋಗ) ಸದಸ್ಯರನ್ನಾಗಿ ನೇಮಕ ಮಾಡಿರುವುದು ಖಂಡನೀಯವಾಗಿದ್ದು ಕೂಡಲೇ ಸರ್ಕಾರ ಆದೇಶ ಹಿಂಪಡೆಯಬೇಕೆಂದು ಜೈ ಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್‌ಸಿ-ಎಸ್‌ಟಿ ಅಸಂಗಟಿತ ಕಾರ್ಮಿಕರ ಅಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಎಸ್.ಮಂಜುನಾಥ್ ಒತ್ತಾಯಿಸಿದರು.
ಕುವೆಂಪು ವಿವಿಯ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಭೋಜ್ಯಾನಾಯ್ಕ ಅವರ ಮೇಲೆ ಶ್ರೀಗಂಧ, ಬೀಟೆ ಮರಗಳ ಕಡಿತಲೆ ಸೇರಿ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಒಂದು ಪ್ರಕರಣದಲ್ಲಿ ಎ-2 ಆರೋಪಿಯಾಗಿಯೂ ಆಗಿದ್ದಾರೆ. ಆದರೆ ಈಗಿರುವ ಕುಲಸಚಿವ (ಆಡಳಿತ) ಎ.ಎನ್.ಮಂಜುನಾಥ್ ಅವರು ಪರಿಶೀಲನೆ ಮಾಡದೇ ಅವರಿಗೆ ಎನ್‌ಒಸಿ(ನಿರಾಕ್ಷೇಪಣಾ ಪ್ರಮಾಣಪತ್ರ) ನೀಡಿದ್ದಾರೆ. ಇದು ಅತ್ಯಂತ ಖಂಡನೀಯ ವಿಚಾರ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈಗಾಗಲೇ ಕೆಪಿಎಸ್‌ಸಿ ಬಗ್ಗೆ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಂಸ್ಥೆಗೆ ಮತ್ತೊಬ್ಬ ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಭೋಜ್ಯಾನಾಯ್ಕ ಅವರ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗುವುದು. ಈ ಬಗ್ಗೆ ಕಾನೂನು ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು. ಎ.ಡಿ.ಆನಂದ್, ನವೀನ್‌ಕುಮಾರ್, ರಾಜಣ್ಣ ಅರ್ಮಾನ್ ಸುದ್ದಿಗೋಷ್ಠಿಯಲ್ಲಿದ್ದರು.
ಭೋಜನಾಯ್ಕ್ ಅವರ ಸ್ಪಷ್ಟೀಕರಣ
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 2018 ರಲ್ಲಿ ಲೇಡಿಸ್ ಹಾಸ್ಟೆಲ್ ನಿರ್ಮಾಣದ ವೇಳೆ ಮರಗಳ ಕಡಿತಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯಾಯಾಲಯದಲ್ಲಿ ಪ್ರಕರಣವಿದ್ದರೂ, ಯೂನಿವರ್ಸಿಟಿಯ ಕೆಲಸಕ್ಕಾಗಿ ಕುಲಸಚಿವರ ಹೆಸರು ಇದೆ. ನಾನು ಇರುವ ತನಕ ನನ್ನ ಹೆಸರು ಇರುತ್ತೆ. ನಾನು ಬಿಟ್ಟು ಬೇರೆಯವರು ಬಂದ ನಂತರ ಅವರು ಈ ಪ್ರಕರಣವನ್ನ ಎದುರಿಸಲಿದ್ದಾರೆ. ಬೇರೆಯವರು ಆ ಸ್ಥಾನಕ್ಕೆ ಬಂದಾಗ ಅವರು ಪ್ರಕರಣ ನಡೆಸಲಿದ್ದಾರೆ.
ಅಲ್ಲದೆ ಲೋಕಾಯುಕ್ತರ ಕಚೇರಿಯಲ್ಲಿದ್ದ ಪ್ರಕರಣಗಳು ಮುಕ್ತಾಯಗೊಂಡಿದೆ. ವಕೀಲರ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.