ಸುದ್ದಿಲೈವ್/ಶಿವಮೊಗ್ಗ
ಈ ಬಾರಿಯ ರಾಗಿಗುಡ್ಡದ ಗಣಪತಿ ಉತ್ಸವಕ್ಕೆ ಅಲಂಕಾರಗಳನ್ನ ನಿರ್ಬಂಧಿಸಲಾಗಿದೆ. ರಾಗಿಗುಡ್ಡದ ಮುಖ್ಯ ರಸ್ತೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬ್ಯಾನರ್, ಫ್ಲೆಕ್ಸ್, ಬಂಟಿಂಕ್ಸ್ ಗಳಿಗೆ ಬ್ರೇಕ್ ಬಿದ್ದ ಪರಿಣಾಮ ಹಬ್ಬದ ಕಳೆಗುಂದಿದೆ. ಕಳೆದ ಬಾರಿ ರಾಗಿಗುಡ್ಡದ ಮೆರವಣಿಗೆಯಲ್ಲಿ ಇವೆಲ್ಲವೂ ರಾರಾಜಿಸಿದ್ದವು.
ಈ ಬಾರಿ ಮುಖ್ಯರಸ್ತೆಯಲ್ಲಿ ಕೇಸರಿ ಅಲಂಕಾರ, ಬ್ಯಾನರ್, ಫ್ಲೆಕ್ಸ್ ಮೊದಲಾದ ಅಲಂಕಾರಗಳಿಗೆ ನಿರ್ಬಂಧಿಸಲಾಗಿದೆ. ಯಾವ ತಿರುವಿನಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆಯೋ, ಅಲ್ಲಿಂದ ಮುಖ್ಯ ರಸ್ತೆಗೆ ತಲುಪುವ ಮಾರ್ಗದಲ್ಲಿ ಮಾತ್ರ ಕೇಸರಿ ಬಂಟಿಂಗ್ಸ್ ಕಟ್ಟಲು ಅವಕಾಶ ಕಲ್ಪಿಸಲಾಗಿದೆ.
ಗಣಪತಿ ಮತ್ತು ಈದ್ ಮೆರವಣಿಗೆ ವೇಳೆ ಮುಖ್ಯ ರಸ್ತೆಯಲ್ಲಿ ಅಲಂಕಾರ ನಿರ್ಬಂಧಿಸುವಂತೆ ಜಿಲ್ಲಾಡಳಿತವೇ ತೀರ್ಮಾನಕೈಗೊಂಡ ಪರಿಣಾಮ ಈ ಬಾರಿಯ ಗಣೇಶ ಹಬ್ಬದ ಮೆರವಣಿಗೆ ಸರಳವಾಗಿ ನಡೆದಿದೆ.
ಛತ್ರಪತಿ ಶಿವಾಜಿ ಯುವಕರ ಸಂಘ, ತಿಲಕ್ ಭಾಯ್ಸ್, ಭುವನೇಶ್ವರಿ ಯುವಕರ ಸಂಘ, ಭಗತ್ ಸಿಂಗ್ ಯುವಕರ ಸಂಘ, ವಿಶ್ವಪ್ರಿಯ ಗಣಪತಿ ಯವಕರ ಸಂಘ, ಕುವೆಂಪು ಯುವಕರ ಸಂಘ, ಮಾರಿಕಾಂಬ ಯುವಕರ ಸಂಘ, ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘ, ವೀರಸಾವರ್ಕರ್ ಸೇರಿದಂತೆ 14 ಪ್ರತಿಷ್ಠಾಪನಾ ಗಣಪತಿ ಮೂರ್ತಿಗಳನ್ನ ಇಂದು ಸಂಜೆ ವಿಸರ್ಜಿಸಲಾಗುತ್ತಿದೆ.
ಭರ್ಜರಿ ಬಂದೋ ಬಸ್ತ್,
ಚಾನೆಲ್ ಏರಿ ಶಾಂತಿನಗರದ ಮಹಾದ್ವಾರಕ್ಕೆ ಬರುತ್ತಿದ್ದಂತೆ ಮಹಾಗಣಪತಿ ದೇವಸ್ಥಾನದ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದೆ. ರಾಗುಗುಡ್ಡದ ಸರ್ಕಲ್ ಬಳಿ ಶಿವಮೊಗ್ಗ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ ನೇತೃತ್ವದಲ್ಲಿ ಆರ್‌ಎಎಫ್, ಕೆಎಸ್‌ಆರ್‌ಪಿ, ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
14 ಗಣಪತಿಗಳು ರಾಗುಗುಡ್ಡದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ಹೊರಟು ಚಾನೆಲ್ ಗೆ ಬಂದು ವಿಸರ್ಜಿಸಲಾಗುತ್ತದೆ. ವಿಸರ್ಜನಾ ಸ್ಥಳಗಳಲ್ಲಿ ಚಾನೆಲ್ ಗೆ ಕಂಬಕಟ್ಟಲಾಗಿದೆ. ಗಣಪತಿ ಸಾಗುವ ವೇಳೆ ಮನೆಯ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿದ್ದಾರೆ. ಒಟ್ಟಿನಲ್ಲಿ ಸರಳ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದೆ.