ಸುದ್ದಿಲೈವ್/ಶಿವಮೊಗ್ಗ
ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಹಯೋಗದೊಂದಿಗೆ ಗುರುವಾರ ರಾಷ್ಟ್ರೀಯ ಪೋಷಕಾಂಶ ಸಪ್ತಾಹದ ಅಂಗವಾಗಿ ನಗರದ ಸೈನ್ಸ್ ಮೈದಾನದ ಸರಕಾರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪೋಷಕಾಂಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಿ.ವೈ.ಚಂದ್ರಶೇಖರ್ ಅವರು ಮಾತನಾಡಿ, ನಾವು ನಿತ್ಯವೂ ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸಿದರೆ ಆರೋಗ್ಯವು ಸದೃಢವಾಗಿರುತ್ತದೆ, ಬೀದಿ ಬದಿ ಎಣ್ಣೆಯಲ್ಲಿ ಖರಿದ ಪದಾರ್ಥಗಳು ಹಾಗೂ ಬೇಕರಿ ತಿನಿಸು ಮತ್ತು ಜೆಂಕ್ ಫುಡ್ ಗಳಿಂದ ದೂರವಿರಬೇಕು, ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸರ್ಜಿ ಆಸ್ಪತ್ರೆಯ ಡಯಟೀಷಿಯನ್ಸ್ ಶ್ರೇಯಸ್ ಹಾಗೂ ನಿಕ್ಷಿತಾ ಅವರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಪೌಷ್ಟಿಕ ಹಾರ ಸೇವಿಸುವ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಯಿತು. ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ರೊ.ಮುಸ್ತಾಕ್ ಅಲಿಶಾ, ಕಾರ್ಯದರ್ಶಿ ರೊ.ಶ್ರೀಕಾಂತ್ ಎ.ವಿ.
ಆಸ್ಪತ್ರೆಯ ಸಿಬ್ಬಂದಿಗಳಾದ ಮಂಜಪ್ಪ, ಆಕಾಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಈ ಸಂದರ್ಭದಲ್ಲಿ ಪೋಷಕಾಂಶಗಳ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.