ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಅನುಪಿನಕಟ್ಟೆ ಗ್ರಾಮದಲ್ಲಿರುವ ಕಸವಿಲೇವಾರಿ ಘಟಕದಲ್ಲಿ ಹಂದಿಗಳ ಕಾಟ ಜೋರಾಗಿದೆ. ಪರಿಣಾಮ ಕಸವಿಲೇವಾರಿ ಘಟಕದಲ್ಲಿನ ಪಕ್ಕದಲ್ಲಿರುವ ರೈತ ಜೋಳದ ಬೆಳೆ ನಾಶವಾಗಿದೆ.ಇದನ್ನು ಖಂಡಿಸಿ ಹನುಮಂತಾಪುರ ಗ್ರಾಮಸ್ಥರು ಕಸವಿಲೇವಾರಿ ಘಟಕಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ನಗರದಲ್ಲಿನ ಕಸವನ್ನು ಅನುಪಿನ ಕಟ್ಟೆಯಲ್ಲಿರುವ ಕಸವಿಲೇವಾರಿ ಘಟಕಕ್ಕೆ ತಂದು ಹಾಕಲಾಗುತ್ತದೆ. ದಿನನಿತ್ಯ ಟನ್ ಗಟ್ಟಲೇ ಕಸವನ್ನು ತಂದು ವಿಲೇವಾರಿ ಮಾಡಲಾಗುತ್ತದೆ.ಈ ಕಸ ವಿಲೇವಾರಿ ಘಟಕದಲ್ಲಿ ಅಕ್ರಮವಾಗಿ ಹಂದಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.ಇದರೊಳಗಿರುವ ಹಂದಿಗಳು ರೈತರ ಜೋಳದ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಜೋಳದ ಬೆಳೆ ಹಾಕಿದ್ದೇವೆ.ಮಳೆ ಹೆಚ್ಚಾದ ಹಿನ್ನಲೆ ಅಲ್ಪಸ್ವಲ್ಪ ಬೆಳೆ ಬಂದಿದೆ.ಬಂದ ಬೆಳೆಯನ್ನು ಹಂದಿಗಳು ನಾಶ ಮಾಡಿವೆ ಎಂದು ರೈತ ಪ್ರಶಾಂತ್ ಆರೋಪಿಸಿದರು.
ಅಲ್ಲದೇ ಕಸವಿಲೇವಾರಿ ಘಟಕದಲ್ಲಿನ ಗೋಡೆಗಳು ಒಡೆದ ಪರಿಣಾಮ ಹಂದಿಗಳು ಹೊರಗೆ ಬರುತ್ತಿವೆ.ಇದರಿಂದ ಹಂದಿಗಳು ಹೊಲಕ್ಕೆ ನುಗ್ಗುತ್ತಿವೆ ಹಾಗೂ ಕಸವಿಲೇವಾರಿ ಘಟಕದಲ್ಲಿನ ತ್ಯಾಜ್ಯ ನೀರು ಚರಂಡಿಗೆ ಹರಿದು ತುಂಗಾನದಿ ಸೇರುತ್ತಿದೆ.ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾವುದೇ ಕ್ರಮಕೈಗೊಂಡಿಲ್ಲ.ಕಸ ತರುವ ವಾಹನಗಳು ವೈಜ್ಞಾನಿಕವಾಗಿ ಸಾಗಾಣಿಕೆ ಮಾಡುತ್ತಿಲ್ಲ. ರಸ್ತೆ ಮೇಲೆ ಕಸವನ್ನು ಚೆಲ್ಲಿ ಕೊಂಡು ಬರುತ್ತಾರೆ ಎಂದು ದೂರಿದರು.
ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ: ಒಂದು ತಿಂಗಳು ಸಮಯ
ಪ್ರತಿಭಟನಾ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ಪ್ರತಿಭಟನಾನಿರತರ ಅಹವಾಲು ಆಲಿಸಿದರು.
ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಬೀದಿ ನಾಯಿ ಹಾವಳಿ,ಹಂದಿಗಳ ತೆರವು ಮಾಡುತ್ತೇವೆ ಎಂದು ಹೇಳಿದರು.