ಸದೃಢ ಸಮಾಜ ನಿರ್ಮಾಣಕ್ಕೆ ಡಾ.ವಾದಿರಾಜ್ ಅವರ ಸಲಹೆ ಏನು?



ಸುದ್ದಿಲೈವ್/ಶಿವಮೊಗ್ಗ 


ಉತ್ತಮ ಜೀವನ ಶೈಲಿಯ ಜೊತೆಗೆ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಂಡರೆ ಸದೃಢ  ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ್ ಕುಲಕರ್ಣಿ ಅಭಿಪ್ರಾಯಪಟ್ಟರು.  


ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಕಾಂಶ ಸಪ್ತಾಹ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರರಿಸಿ ಮಾತನಾಡಿ, ಬಾಯಿ ಮತ್ತು ನಾಲಿಗೆ ರುಚಿಗೆ ಆದ್ಯತೆಗಿಂತ ದೇಹಾರೋಗ್ಯ ಕಾಪಾಡುವಂತಹ ಆಹಾರವನ್ನು ನಾವು ಸೇವಿಸಬೇಕು ಎಂದು ಹೇಳಿದರು. . 


ಫಿಜಿಷಿಯನ್ ಡಾ.ಮೈಥಿಲಿ ಮಾತನಾಡಿ, ಎಣ್ಣೆಯಲ್ಲಿ ಖರಿದ ಪದಾರ್ಥಗಳಿಗಿಂತ ತರಕಾರಿ, ಸೊಪ್ಪು ಸೇರಿದಂತೆ ಸಾತ್ವಿಕ ಆಹಾರಕ್ಕೆ ಜೊತೆಗೆ ನಿತ್ಯವೂ ವ್ಯಾಯಾಮ, ಸಮತೋಲಿತ ಆಹಾರ ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು. 


ಫಿಜಿಷಿಯನ್ ಡಾ.ಶೂನ್ಯ ಸಂಪದ್ ಮಾತನಾಡಿ, ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ, ಆದರೆ, ಉತ್ತಮವಲ್ಲದ ಜೀವನಶೈಲಿಯಿಂದಾಗಿ ಮಧುಮೇಹ , ರಕ್ತದೊತ್ತಡ  ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ನಾವೇ ಕಾರಣರಾಗುತ್ತೇವೆ, ಹಾಗಾಗಿ ಉತ್ತಮ ಜೀವನ ಶೈಲಿ ಹೊಂದಬೇಕು ಎಂದು ಸಲಹೆ ನೀಡಿದರು. 


ಆಸ್ಪತ್ರೆಯ ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್ ಮಾತನಾಡಿ, ಸ್ವಸ್ಥ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ಹೊಂದುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 


ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಯ ನ್ಯೂಟ್ರಿಷಿಯನ್ ಆಂಡ್ ಡಯಟಿಷಿಯನ್ ಶ್ರೇಯಸ್, ನಿಕ್ಷಿತಾ, ಆಶಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close