ನಗರದಲ್ಲಿ ಸ್ವರ್ಣಗೌರಿ ಹಬ್ಬದ ಸಂಭ್ರಮ



ಸುದ್ದಿಲೈವ್/ಶಿವಮೊಗ್ಗ


ಇಂದು ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ನಡೆಯುತ್ತಿದೆ.  ಅದರಂತೆ ಇಂದು ಗೌರಿಯನ್ನು ದೇವಾಲಯಗಳಲ್ಲಿ, ಮನೆ-ಮನೆಗಳಲ್ಲಿ ಪ್ರತಿಷ್ಟಾಪಿಸಿ, ಅತ್ಯಂತ ಸಡಗರ ಸಂಭ್ರಮದಿಂದ ಪೂಜಿಸಲಾಗುತ್ತಿದೆ.  ಮಹಿಳೆಯರು, ಮಕ್ಕಳು ಸೇರಿದಂತೆ ಮನೆ ಮಂದಿಯಲ್ಲಾ ಇಂದು ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.  


ತವರಿನೊಂದಿಗೆ ಅವಿನಾಭಾವ ಸಂಬಂಧದ ಸಂಕೇತವಾಗಿರುವ ಗೌರಿ ಹಬ್ಬ, ಮಹಿಳೆಯರಲ್ಲಿ ಸಡಗರ ಮನೆ ಮಾಡುತ್ತದೆ.  ಶಿವಮೊಗ್ಗದಲ್ಲಿಯೂ ಇಂದು ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.  ಹೇಗಿತ್ತು ಸ್ವರ್ಣಗೌರಿ ಹಬ್ಬ.....?  ನೋಡೋಣ ಬನ್ನಿ


ವಿಘ್ನ ನಿವಾರಕ ಗಣಪನ ಹಬ್ಬದ ಮುನ್ನ ದಿನ, ತಾಯಿ ಗೌರಿ ಹಬ್ಬವನ್ನು, ಸಂಪ್ರದಾಯವಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿರುವ ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿಗೆ ಸಂಭ್ರಮ.   ಮದುವೆಯಾಗಿರಲಿ, ಆಗಿರದೆ ಇರಲಿ, ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸುವುದು ರೂಢಿ.  ಹೇಳಿ ಕೇಳಿ ಇದು ಮಹಿಳೆಯರದೇ ಹಬ್ಬವಾಗಿರೋದ್ರಿಂದ, ಮಹಿಳೆಯರೇ, ಗೌರಿಯನ್ನು ಪೂಜಿಸಿ, ಆರತಿ ಬೆಳಗಿ, ನಮಸ್ಕರಿಸುತ್ತಾರೆ.  


ವಿಶೇಷ ಪೂಜಾ ಸಾಮಾಗ್ರಿಗಳೊಂದಿಗೆ ಅಣಿಯಾದ ಮಹಿಳೆಯರು, ಗೌರಿಗೆ ಆರತಿ ಬೆಳಗಿ, ತಾಯಿ, ನಮ್ಮನ್ನು ರಕ್ಷಿಸು, ಹರಸು ಎಂದು ಆರತಿ ಬೆಳಗಿ, ಭಕ್ತಿಯ ಹಾಡುಗಳನ್ನು ಹಾಡುತ್ತಾ, ಪೂಜೆ ಸಲ್ಲಿಸುತ್ತಾರೆ.  ಅದರಂತೆ, ಇಂದು ನಗರದ ವಿವಿಧ ದೇವಾಲಯದಲ್ಲಿಯೂ ಕೂಡ ಸ್ವರ್ಣ ಗೌರಿಯನ್ನು, ವಿಶೇಷ ಅಲಂಕಾರಗಳಿಂದ ಪ್ರತಿಷ್ಟಾಪಿಸಿ, ಹೂಗಳಿಂದ ಅಲಂಕರಿಸಿ, ಪೂಜಿಸಲಾಯಿತು.  ಕೊರೋನಾ ಸೋಂಕು ಭೀತಿ ಬಳಿಕ ಕಳೆದೆರೆಡು ವರ್ಷಗಳ ಬಳಿಕ ಇಂದು ಸ್ವರ್ಣಗೌರಿ ಹಬ್ಬವನ್ನು ಅತ್ಯಂತ ವೈಭವದಿಂದ, ಬಾಗಿನ ಅರ್ಪಿಸಿ ಪೂಜೆ ನೆರವೇರಿಸಲಾಯಿತು.


ತನ್ನನ್ನು ನಂಬಿದ ಭಕ್ತರ ಇಷ್ಟಾರ್ಥಗಳನ್ನು, ಈಡೇರಿಸುವ ಗಣಪ ಭೂಲೋಕಕ್ಕೆ ಇಳಿದು ಬರುತ್ತಿದ್ದಾನೆ.  ವಿಘ್ನನಾಶಕನ ಬರುವಿಕೆಗೆ ಒಂದು ದಿವಸ ಮುಂಚೆಯೇ ಅವನ ಹೆಮ್ಮೆಯ ಅಮ್ಮ, ಸ್ವರ್ಣಗೌರೀಯೂ ಧರೆಗೆ ಬಂದಿಳಿದಿದ್ದಾಳೆ.  ಹೀಗಾಗಿ ನಗರದ ವಿವಿಧ ದೇವಾಲಯದಲ್ಲಿ, ಸುಮಂಗಲಿಯರು ಉಡಿ ತುಂಬಿ ಸಂಭ್ರಮಿಸಿದರು.  ಕಳೆದ 75 ವರ್ಷಗಳಿಂದ ಇಲ್ಲಿ ಗೌರಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ವಿಶೇಷವಾಗಿ ಇಲ್ಲಿ ಮಹಿಳೆಯರೇ ಗೌರಿಯನ್ನು ಪೂಜಿಸಿ, ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವುದು ವಾಡಿಕೆ.  ಅದರಂತೆ, ಇಂದು ಗೌರಿಯನ್ನು ಪೂಜಿಸಲು ಮಹಿಳೆಯರು ದೇವಾಲಯದಲ್ಲಿ ಸಾಲಾಗಿ ನಿಂತು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದು, ಕಂಡು ಬಂದಿದೆ.  ಬಾಗಿನ, ವಿಶೇಷ ಪೂಜಾ ಸಾಮಾಗ್ರಿಗಳೊಂದಿಗೆ ಆಗಮಿಸಿದ್ದ ಮಹಿಳೆಯರು, ದೇವಾಲಯದಲ್ಲಿ ತಮ್ಮ ಸಂಭಂದಿಕರಿಗೆ ಬಾಗಿನ ನೀಡಿ, ಉಡಿ ತುಂಬಲಾಗಿದೆ.


ಒಟ್ಟಿನಲ್ಲಿ, ಇಂದು, ನಗರದಲ್ಲಿ, ಮನೆ ಮನೆಗಳಲ್ಲಿ, ದೇವಾಲಯಗಳಲ್ಲಿ, ಸಡಗರ ಮತ್ತು ಸಂಭ್ರಮದಿಂದ ಗೌರಿ ಹಬ್ಬವನ್ನು ಆಚರಿಸಲಾಯಿತು.  ಜಗತ್ತಿನ ಎಲ್ಲಾ ಅಡ್ಡಿ ಆತಂಕಗಳನ್ನು ಅದರಲ್ಲೂ, ಈ ಬಾರಿಯ ರೋಗ ರುಜ್ಜೀನಗಳ ಕಾಟ ನಿವಾರಿಸಿ, ಕೆಲಸ ಕಾರ್ಯಗಳೆಲ್ಲಾ ನಿರ್ವಿಘ್ನವಾಗಿ ನಡೆಯಲೆಂದು ಆಶೀರ್ವದಿಸಲು, ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯಂದು, ವಿಘ್ನವಿನಾಯಕ, ಗೌರಿ ಸುತ ಗಣಪ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close