ಸುದ್ದಿಲೈವ್/ಶಿವಮೊಗ್ಗ
ಸರ್ಕಾರ ಸಕಾಲದಲ್ಲಿ ಮೃತ ಚಂದ್ರಶೇಖರ್ ಅವರ ಆತ್ಮಹತ್ಯೆಯ ವೇಳೆ ಹೇಳಿದ ಭರವಸೆಯನ್ನ ಈಡೇರಿಸದ ಹಿನ್ನಲೆಯಲ್ಲಿ ಇಂದು ಈಶ್ವರಪ್ಪ ಐದು ಲಕ್ಷ ರೂ. ಹಣವನ್ನ ಕೊಟ್ಟುಬಂದಿದ್ದಾರೆ. ನಗರದ ವಿನೋಬನಗರದ ಶಿವಾಲಯದಿಂದ ಕೆಂಚಪ್ಪ ಲೇಔಟ್‌ನಲ್ಲಿರುವ ಮೃತ ಚಂದ್ರಶೇಖರ್ ಮನೆಗೆ ಪಾದಯಾತ್ರೆ ನಡೆಸಿ ಮೃತರ ಪತ್ನಿಗೆ ಹಣನೀಡಲಾಯಿತು.
ಶಿವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಮಾಜಿ ಡಿಸಿಎಂ ಪುತ್ರ ಕಾಂತೇಶ್ ಹಾಗೂ ರಾಷ್ಟ್ರಭಕ್ತರ ಬಳಗದೊಂದಿಗೆ ಹೆಜ್ಜೆಹಾಕಿ ಮೃತರ ಪತ್ನಿಗೆ ಹಣವನ್ನ ಕೊಟ್ಟುಬಂದಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ವೇಳೆ ಸಾಂತ್ವಾನ ಹೇಳಲು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಂಡೋಪ ತಂಡವಾಗಿ ಬಂದು ಭರವಸೆ ನೀಡಿದರು. ಆದರೆ ಮೊದಲ ಬಾರಿಗೆ ಭೇಟಿ ನೀಡಿದ ಈಶ್ವರಪ್ಪ 3 ಲಕ್ಷ ರೂ. ಹಣ ನೀಡಿ ಬಂದಿದ್ದರು.
ಈಗ ಸರ್ಕಾರಕ್ಕೆ ಸೆಡ್ಡು ಹೊಡೆದು ಐದು ಲಕ್ಷ ರೂ. ನೀಡಿ ಬಂದಿದ್ದಾರೆ. ಮೃತರ ಕುಟುಂಬ ಧನ ಹಾಗೂ ಉದ್ಯೋಗದ ಎದುರು ನೋಡುತ್ತಿದೆ. ಆದರೆ ಸರ್ಕಾರ ಭರವಸೆ ನೀಡಿ ಇದುವರೆಗೆ ಈಡೇರಿಸಲೇ ಇಲ್ಲ. ಹಾಗಾಗಿ ಈಶ್ವರಪ್ಪನವರು ನುಡಿದಂತೆ ನಡೆದಿದ್ದಾರೆ.
ಜೈಲ್‌ಭರೋ ಎಚ್ಚರಿಕೆ
ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಮಾಜಿ ಡಿಸಿಎಂ, ನಾನು ತುಂಬಾ ನೊಂದು ಮಾತನಾಡ್ತಿದ್ದೀನಿ. ಇಡಿ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅನ್ನುವುದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಾಕ್ಷಿಯಾಗಿದೆ. ಚಂದ್ರಶೇಖರ್ ಮೃತಪಟ್ಟಾಗ ಸಿಎಂ ಇಲ್ಲಿಗೆ ಬರಬೇಕಿತ್ತು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಅಂತಾ ಹೇಳಬೇಕಿತ್ತು ಎಂದು ಆಗ್ರಹಿಸಿದರು.
ಸಚಿವರಾಗಿದ್ದ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇವತ್ತು ಜೈಲಿನಲ್ಲಿ ಇದ್ದಾರೆ. ಚಂದ್ರಶೇಖರ್ ಆತ್ಮಹತ್ಯೆಗೆ ಮುಖ್ಯಮಂತ್ರಿ ಪರಿಹಾರ ಕೊಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳ ಭರವಸೆ ಹಾಗೆಯೇ ಉಳಿದಿದೆ. ಚಂದ್ರಶೇಖರ್ ಕುಟುಂಬಕ್ಕೆ ಈ ಹಿಂದೆ ರಾಷ್ಟ್ರ ಭಕ್ತರ ಬಳಗದಿಂದ ಈ ಹಿಂದೆ 3 ಲಕ್ಷ ಕೊಟ್ಟಿದ್ದೇವು.
ಇಂದು 5 ಲಕ್ಷ ರೂ ಪರಿಹಾರದ ಹಣ ಕೊಟ್ಟಿದ್ದೇವೆ. ಸೆ. 20 ರೊಳಗೆ ಸರಕಾರದ ಪರಿಹಾರ ಕೊಡಬೇಕು. ಪರಿಹಾರ ಕೊಡದಿದ್ದರೆ ಜೈಲು ಭರೋ ಚಳುವಳಿ ಮಾಡ್ತೀವಿ. ಪರಿಹಾರ ಸಿಗಲಿ ಅನ್ನೋದು ನಮ್ಮ ಉದ್ದೇಶವಾಗಿದೆ. ಸಿಎಂ ಈ ಬಗ್ಗೆ ಗಮನಹರಿಸಿ ಪರಿಹಾರ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಮೃತರ ಪತ್ನಿ ಹೇಳಿಕೆ
ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಪತ್ನಿ ಕವಿತಾ ಮಾತನಾಡಿ, ನನ್ನ ಪತಿ ಮೃತಪಟ್ಟಾಗ ಈಶ್ವರಪ್ಪ ನಮ್ಮ ನಿವಾಸಕ್ಕೆ ಬಂದಿದ್ದರು. ಈ ಹಿಂದೆಯೂ 3 ಲಕ್ಷ ಪರಿಹಾರ ಕೊಟ್ಟಿದ್ದರು. ಇನ್ನು ಹೆಚ್ಚಿನ ಪರಿಹಾರ ಕೊಡುವ ಭರವಸೆ ನೀಡಿದ್ದರು. ಅದರಂತೆ ಇಂದು ಮತ್ತೆ 5 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಸರಕಾರದಿಂದ ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ. ಪರಿಹಾರ ಕೊಡುತ್ತೇವೆ ಅಂದಿದ್ದರು ಆದರೂ ಪರಿಹಾರ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.