ಕಾಲು ಸಂಕಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಪಡೆಯಲು ಎಂಎಡಿಬಿ ತೀರ್ಮಾನ


Suddilive/ಶಿವಮೊಗ್ಗ

ನಬಾರ್ಡ್‌ನಿಂದ 2024-25ನೇ ಸಾಲಿಗೆ ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ) ವ್ಯಾಪ್ತಿಯ ಬೃಹತ್ ತೂಗುಸೇತುವೆಗಳು, ತೂಗು ಸೇತುವೆಗಳು ಹಾಗೂ ಕಾಲು ಸಂಕಗಳಿಗೆ 200 ಕೋಟಿ ರೂ. ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲು ಮಂಡಳಿ ನಿರ್ಧರಿಸಿತು.

ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಶನಿವಾರ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ, 2022-23ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ನೆರವು ಪಡೆದು ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಯೋಜನೆ ರೂಪಿಸಲು ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಹಂಚಿಕೆ ಮಾಡಲು ಸರ್ಕಾರಕ್ಕೆ ಕೋರಲಾಗಿತ್ತು. ಇದೀಗ ಅದನ್ನು 200 ಕೋಟಿ ರೂ.ಗೆ ಹೆಚ್ಚಿಸಲು ಮಂಡಳಿ ಅನುಮೋದಿಸಿತು.

ಸರ್ಕಾರದಿಂದ ಕಳೆದ ಆಯವ್ಯಯದಲ್ಲಿ ನಬಾರ್ಡ್ ಯೋಜನೆಯಡಿ ಅನುದಾನ ಹಂಚಿಕೆ ಮಾಡದೇ ಇರುವುದರಿಂದ 2024-25ನೇ ಸಾಲಿಗೆ ಬೃಹತ್ ತೂಗುಸೇತುವೆಗಳಿಗೆ 115.73 ಕೋಟಿ ರೂ., ತೂಗುಸೇತುವೆ ಹಾಗೂ ಕಾಲು ಸಂಕಗಳನ್ನು ನಿರ್ಮಿಸಲು ತಲಾ 40 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಪರಿಷ್ಕೃತ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಮಂಡಳಿಯ ಪ್ರಭಾರ ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಅವರು ಸಭೆಗೆ ಮಂಡಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಶಾಸಕರು, ಎಂಎಲ್‌ಸಿಗಳು ಸರ್ವಾನುಮತದಿಂದ ಅಂಗೀಕರಿಸಿದರು.

ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಮಂಜುನಾಥಗೌಡ, ನಬಾರ್ಡ್ ಪರಿಷ್ಕೃತ ಪ್ರಸ್ತಾವನೆಯಂತೆ ಹಣ ಕೊಡಲು ಸಿದ್ಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಚರ್ಚಿಸಿದ್ದಾರೆ. 20 ವರ್ಷಗಳ ಅವಧಿಗೆ ನಬಾರ್ಡ್ ಸಾಲ ನೀಡಲಿದ್ದು ಬಡ್ಡಿ ಸಹಿತವಾಗಿ ಸರ್ಕಾರ ನಬಾರ್ಡ್‌ಗೆ ಮರುಪಾವತಿ ಮಾಡಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಮಂಜುನಾಥ ಭಂಡಾರಿ, ಬೃಹತ್ ತೂಗುಸೇತುವೆಗಳು ಎಂದಷ್ಟೇ ಹೇಳಲಾಗಿದೆ. ಅವುಗಳ ಸ್ವರೂಪ, ಉದ್ದ, ಅಗಲ ಎಷ್ಟಿರಬೇಕು ?, ಒಂದೊಂದಕ್ಕೂ ಎಷ್ಟು ಬಜೆಟ್ ಬೇಕು ?ಎಂಬ ನಿಖರ ಮಾಹಿತಿ ಇಲ್ಲ. ಮೀಸಲಿರುವ ಅನುದಾನ ಬೃಹತ್ ತೂಗು ಸೇತುವೆಗಳಿಗೆ ಸಾಕಾಗಲಿದೆ ಎಂಬ ಅನುಮಾನಗಳೂ ಇವೆ ಎಂದರು. ಅದಕ್ಕೆ ಶಾಸಕ ಭೀಮಣ್ಣ ನಾಯ್ಕ ಧ್ವನಿಗೂಡಿಸಿದರು. 

ಬೆಂಗಳೂರಲ್ಲಿ ಸಿಎಂ ಸಮ್ಮುಖದಲ್ಲಿ ಸಭೆ: 2025ರ ಮಾರ್ಚ್‌ನೊಳಗೆ ಪ್ರಸಕ್ತ ಸಾಲಿನ ಎಲ್ಲ ಯೋಜನೆಗಳನ್ನು ಮುಕ್ತಾಯಗೊಳಿಸಬೇಕಿದೆ. ಅದಕ್ಕೆ ಎಲ್ಲ ಶಾಸಕರು, ಎಂಎಲ್‌ಸಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮನವಿ ಮಾಡಿದರು. ಅಧ್ಯಕ್ಷನಾದ ಬಳಿಕ ಮೊದಲ ಸಭೆ ಇದಾಗಿದೆ. ಈ ಬಾರಿ ನಬಾರ್ಡ್‌ನಿಂದ ಸಾಲ ಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದರು. ದೂರದ ಜಿಲ್ಲೆಗಳಿಂದ ಸಾಮಾನ್ಯ ಸಭೆಗೆ ಬರುವುದಕ್ಕೆ ಕೆಲ ಜನಪ್ರತಿನಿಧಿಗಳಿಗೆ ಸಮಸ್ಯೆಯಾಗುತ್ತಿದೆ. ಆ ಕಾರಣಕ್ಕೆ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಮಂಡಳಿಯ ಎಲ್ಲ ಸದಸ್ಯರ ಸಭೆ ನಡೆಸಿ ಯೋಜನೆಗಳ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಂಡಳಿ ಯೋಜನೆಗಳಿಗೆ ಕ್ಲಾರಿಟಿ ಇಲ್ಲ: ಮಂಡಳಿ ಯೋಜನೆಗಳಿಗೆ ಯಾವುದೇ ಕ್ಲಾರಿಟಿ ಇಲ್ಲ. ಹಿಂದಿನ ಯೋಜನೆಗಳಿಗೆ ಕಾಲಮಿತಿ ಇಲ್ಲ. ಹಾಗಾದರೆ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಎಂಎಲ್‌ಸಿ ಮಂಜುನಾಥ ಭಂಡಾರಿ ಹೇಳಿದರು. ಕಾಮಗಾರಿಗಳು ವಿಳಂಬ ಆದಷ್ಟೂ ಉತ್ಪನ್ನಗಳ ವೆಚ್ಚ ಹೆಚ್ಚಾಗಲಿದೆ. ಮಂಡಳಿಗೆ ಅನುದಾನ ಹೆಚ್ಚಿಸುವ ಅಧಿಕಾರವೂ ಇಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕೆಲಸ ಮುಗಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಲಮಿತಿ ನೀಡುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು. ಇದಕ್ಕೆ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಜಿ.ಶಾಂತನಗೌಡ ಧ್ವನಿಗೂಡಿಸಿದರು.

ವಾಕಿಂಗ್ ಪಾತ್ ನಿರ್ಮಾಣಕ್ಕೆ ಆಕ್ಷೇಪ: ಮಂಡಳಿ ಹಿಂಭಾಗವೇ ಸದಸ್ಯರ ಅನುಮತಿ ಪಡೆಯದೇ 13 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗಿದೆ. ಇದು ಮಂಡಳಿಯ ಕಾಯ್ದೆಯಲ್ಲಿ ಅವಕಾಶವಿದೆಯಾ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಪ್ರಶ್ನಿಸಿದರು. ಸಾರ್ವಜನಿಕ ಬಳಕೆಗೆ ಅವಕಾಶವಿದ್ದರೆ ಆಕ್ಷೇಪವಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಮಂಡಳಿ ಸದಸ್ಯರಿಗೆ, ಅಧಿಕಾರಿಗಳಿಗೆ ವಾಕಿಂಗ್ ಪಾತ್ ಮಾಡಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥಗೌಡ, ಸಚಿವ ಡಿ.ಸುಧಾಕರ್ ಅವರು ಅಧಿಕಾರ ವಹಿಸಿಕೊಂಡಿದ್ದಾಗ ನಿರ್ಮಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

124 ಕಾಮಗಾರಿಗಳು ರದ್ದು: 13 ಜಿಲ್ಲೆಗಳ ವ್ಯಾಪ್ತಿಯಲ್ಲಿ 124 ಕಾಮಗಾರಿಗಳು ರದ್ದಾಗಿವೆ ಎಂದು ಕಾರ್ಯದರ್ಶಿ ಗಾಯತ್ರಿ ಸಭೆ ಗಮನಕ್ಕೆ ತಂದರು. ಶಾಸಕ ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೂರಾರು ಕಾಮಗಾರಿಗಳು ರದ್ದಾಗಿವೆ. ಇದು ಎಂಎಡಿಬಿಗೆ ಮಾಡಿದ ಅವಮಾನ. ಕಾಮಗಾರಿಗಳನ್ನು ರದ್ದು ಮಾಡಿ ಅನುದಾನ ಹಿಂಪಡೆಯುವ ಶೋಚನೀಯ ಸ್ಥಿತಿಗೆ ಸರ್ಕಾರ ಬಂದಿದೆ. ತಕ್ಷಣವೇ ಅನುದಾನ ಬಿಡುಗಡೆ ಮಾಡಿ ರದ್ದಾಗಿರುವ ಎಲ್ಲ ಕಾಮಗಾರಿಗಳನ್ನು ಶುರು ಮಾಡಬೇಕು ಎಂದು ಒತ್ತಾಯಿಸಿದರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket