ಸುದ್ದಿಲೈವ್/ಸೊರಬ
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಸೋಮವಾರ ಪಟ್ಟಣದ ರೈತ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಅಡಿಯಲ್ಲಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಬೃಹತ್ ಮಾನವ ಸರಪಳಿ ನಿರ್ಮಿಸಿ ನಾಮ ಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ, ಬಾಂಗ್ಲಾದೇಶದ ಸಂತ್ರಸ್ತ ಹಿಂದುಗಳಿಗೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಹಿಂದೂ ಹಿತರಕ್ಷಣಾ ವೇದಿಕೆಯ ಕಾಳಿಂಗರಾಜ್ ಮಾತನಾಡಿ, "ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾ ಇಸ್ಲಾಮಿಕ್ ಜಿಹಾದಿಗಳು ಸ್ತ್ರೀಯರು, ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಗಾಜಾ ಪಟ್ಟಿಯಲ್ಲಿ ಏನಾದರೂ ಘಟಿಸಿದರೆ, ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಹಿಂದುಗಳ ಮೇಲಿನ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುತ್ತಿಲ್ಲ," ಎಂದು ಆಕ್ಷೇಪಿಸಿದರು.
ಬಾಂಗ್ಲಾದೇಶಿ ಹಿಂದುಗಳ ರಕ್ಷಣೆಗೆ ತಕ್ಷಣವೇ ಕೇಂದ್ರ ಸರ್ಕಾರ ಮುಂದಾಗಬೇಕು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಹಿಂಸಾಚಾರ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಆಯೋಗ ಸ್ಥಾಪನೆ ಮಾಡಿ, ಅಲ್ಲಿನ ಹಿಂದುಗಳಿಗೆ ನ್ಯಾಯವನ್ನು ನೀಡಬೇಕು. ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿ, ವಿಶೇಷ ನಿಯೋಗವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ, ಪೀಡಿತ ಹಿಂದು ಕುಟುಂಬಗಳಿಗೆ ಪರಿಹಾರ ಒದಗಿಸಬೇಕು," ಎಂದು ಕಾಳಿಂಗರಾಜ ಆಗ್ರಹಿಸಿದರು.
ಸಮಾಜ ಸೇವಕರಾದ ಡಾ|| ಜ್ಞಾನೆಶ ಮಾತನಾಡಿ, "ಭಾರತದಲ್ಲಿರುವ ಸೆಕ್ಯುಲರ್‌ವಾದಿಗಳು ಮತ್ತು ಬುದ್ಧಿಜೀವಿಗಳು ಟರ್ಕಿಯಲ್ಲಿ ಅಥವಾ ಪ್ಯಾಲಿಸ್ಟೈನ್‌ನಲ್ಲಿ ಸಂಭವಿಸುವ ಘಟನೆಗಳಿಗೆ ಧ್ವನಿಯೆತ್ತುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಅವರ ಡೋಂಗಿ ಮಾನಸಿಕತೆಯನ್ನು ತೋರಿಸುತ್ತದೆ," ಎಂದು ದೂರಿದರು.
ಈ ಸಂದರ್ಭದಲ್ಲಿ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ಸಮಾಜಿಕ ಚಿಂತಕರು, ರೈತರು ಹಾಗೂ ಹಿಂದೂಗಳು ಭಾಗವಹಿಸಿದ್ದರು.