ಸುದ್ದಿಲೈವ್/ಹೊಸನಗರ
ಸಾಲಬಾಧೆಗೆ ತುತ್ತಾಗಿ ತಾಲೂಕಿನ ನಗರ ಹೋಬಳಿ ಮುಂಡಳ್ಳಿ ಸಮೀಪದ ನರ್ತಿಗೆ ಗ್ರಾಮದ ವಾಸಿ ರೈತ ಎನ್.ಟಿ. ತಿಮ್ಮಪ್ಪ(52) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ.
ತನ್ನ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ ವೇಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಾಂತಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಮನೆಯವರು ವಿಚಾರಿಸಲು ಮುಂದಾದಾಗ ವಿಷದ ವಾಸನೆ ಬಂದಿದೆ. ತತಕ್ಷಣ ಚಿಕಿತ್ಸೆ ಕೊಡಿಸಲು ಮುಂದಾದರೂ ಪ್ರಯೋಜನವಾಗದ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ.
ಮೃತನಿಗೆ 1.25 ಎಕರೆ ತರಿ, 2 ಎಕರೆ ಬಾಗಾಯ್ತು ಜಮೀನಿದ್ದು, ಕೃಷಿಗಾಗಿ ಧರ್ಮಸ್ಥಳ ಸಂಘ, ನಗರ ನೀಲಕಂಠೇಶ್ವರ ಸಹಕಾರ ಸಂಘ, ಜಯನಗರ ಉಜ್ಜೀವನ್ ಫೈನಾನ್ಸ್, ರಿಪ್ಪನ್ ಪೇಟೆಯ ಚೈತನ್ಯ ಗ್ರಾಮೀಣ ಬ್ಯಾಂಕ್, ಮೂಕಾಂಬಿಕ ಸ್ವಸಹಾಯ ಸಂಘ ಸೇರಿದಂತೆ, ತನ್ನ ಹಾಗು ಪತ್ನಿ ಹೆಸರಲ್ಲಿ ರೂ 6.5 ಲಕ್ಷ ಹಣ ಸಾಲ ಪಡೆದಿದ್ದಾನೆ.
ಕೃಷಿಯಲ್ಲಿ ಹೆಚ್ಚಿನ ಆದಾಯ ಬಾರದ ಕಾರಣ ಸಾಲಬಾಧೆಗೆ ತುತ್ತಾಗಿ ಕೊನೆಗೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪುತ್ರ ಅಮಿತ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಕೋಳಿ ಪ್ರಕರಣ ದಾಖಲಿಸಿದ್ದಾರೆ.