ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲವು 2024ರ ಜುಲೈ ತಿಂಗಳಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ಮತ್ತು ಭೂ ಕಬಳಿಕೆಯಾದ ಜಮೀನನ್ನು ಸರ್ಕಾರಕ್ಕೆ ವಾಪಸ್ಸು ಪಡೆಯಲು ಅದೇಶ ನೀಡಿರುತ್ತದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನನ್ನು ಅದೇ ಗ್ರಾಮದ ಚನ್ನಯ್ಯ ಬಿನ್ ವೀರಯ್ಯ ಎಂಬುವವರು 25 ಗುಂಟೆ ಜಮೀನು ಹಾಗೂ ಬಸಪ್ಪ ಬಿನ್ ಲೇಟ್ ಅಯ್ಯಣ್ಣ ಎಂಬುವವರು 36 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಎಂಬ ಗ್ರಾಮಸ್ಥರ ದೂರಿನನ್ವಯ ಶಿಕಾರಿಪುರ ತಹಶೀಲ್ದಾರ್ ನೀಡಿ ದೂರನ್ನು ಪರಿಗಣಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕ.ಭೂ.ಕಂ. ಅಧಿನಿಯಮದಡಿ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವೀಕರಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/-ರೂ. ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು 2ನೇ ವಿಶೇಷ ನ್ಯಾಯಾಲಯದ ಸದಸ್ಯರಾದ ಕೆ.ಹೆಚ್.
ಅಶ್ವತ್ಥ ನಾರಾಯಣಗೌಡ ಪೀಠವು ಜು.25 ರಂದು ತೀರ್ಪು ನೀಡಿದೆ. ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಿಕಾರಿಪುರ ತಹಶೀಲ್ದಾರ್‌ರವರಿಗೆ ನೀರ್ದೇಶಿಸಿ ತೀರ್ಪು ನೀಡಿದೆ.