ಸುದ್ದಿಲೈವ್/ಶಿವಮೊಗ್ಗ
ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಾಸಭಾದ ಕಾರ್ಯಕರ್ತರು ಯೋಜನೆಯ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು
ಶರಾವತಿಯಿಂದ ಬೆಂಗಳೂರಿಗೆ ಸುಮಾರು 400 ಕಿ.ಮೀ. ಅಂತರ ಇದೆ. ಇಷ್ಟು ದೂರ ನೀರನ್ನು ತೆಗೆದುಕೊಂಡು ಹೋಗುವುದು ಕಾರ್ಯ ಸಾಧು ಅಲ್ಲ. ಇಂತಹ ಯೋಜನೆಯಿಂದ ಯಾರಿಗೂ ಲಾಭವಿಲ್ಲ. ದಟ್ಟ ಕಾಡಿನ ಮಧ್ಯದಿಂದ 350 ಎಕರೆ ಜಾಗದಲ್ಲಿ ಪಂಪ್ಡ್ ಸ್ಟೋರೇಜ್ ಮಾಡಿ ವಿದ್ಯುತ್ ಉತ್ಪಾದಿಸುವುದು. ನದಿ ನೀರನ್ನು ಕೊಳವೆ ಮೂಲಕ 400 ಕಿಲೋ ಮೀಟರ್ ಹರಿಸುವಂತಹ ಯೋಜನೆಗಳು ಪ್ರಪಂಚದ ಯಾವುದೇ ಮೂಲೆಯಲ್ಲಿ ಇಲ್ಲ. ಅದರಲ್ಲೂ ಮಲೆನಾಡಿನ ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕೊಡುವ ಸ್ಥಿತಿ ಇರುವಾಗ ಮತ್ತೆ ಇಂತಹ ಬೃಹತ್ ಯೋಜನೆಗಳ ಅಗತ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
135 ಕಿ.ಮೀ ಹರಿಯುವ ಶರಾವತಿಯಂತಹ ಚಿಕ್ಕ ನದಿಯ ಮೇಲೆ ಆಗಿರುವಷ್ಟು ದೌರ್ಜನ್ಯ ಪ್ರಪಂಚದ ಯಾವುದೇ ನದಿಯ ಮೇಲೂ ಆಗಿಲ್ಲ. ಹಾಗೆ ನೋಡಿದರೆ ಇದು ನದಿ ತಿರುವು ಯೋಜನೆ ಅಲ್ಲ. ಶರಾವತಿ ಅಪಹರಣ ಯೋಜನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ರುದ್ರಸಜ್ಜನ್, ಸಂತೋಷ್ ಬೆಳ್ಳೆಕೆರೆ, ಅನಿತಾ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.