ಸುದ್ದಿಲೈವ್/ಶಿವಮೊಗ್ಗ
ವಯನಾಡು ಮತ್ತು ಶಿರೂರು ಗುಡ್ಡು ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅರಣ್ಯ ಒತ್ತುವರಿ ನೆಪದಲ್ಲಿ ಬಡ ಮತ್ತು ಸಣ್ಣ ಹಿಡುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಇತ್ತೀಚೆಗಷ್ಟೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಅರಣ್ಯಾಕಾರಿಗಳ ಸಭೆಯಲ್ಲಿ 2015ರ ನಂತರದಲ್ಲಿ ಒತ್ತುವರಿಯಾದ ಅರಣ್ಯ ಭೂಮಿ ತೆರವು ಗೊಳಿಸಲು ಮಾತ್ರ ನಡಾವಳಿಗಳನ್ನು ಕೈಗೊಳ್ಳಲಾಗಿತ್ತು.
2015ಕ್ಕಿಂತ ಹಿಂದಿನ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಸಿದಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಬೇಕಾಗಿದೆ. ಸರ್ವೇ ನಡೆಯುವ ಮುಂಚೆಯೇ ಅರಣ್ಯ ಇಲಾಖೆ ಬಡ ಸಾಗುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿದ್ದು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಸಭೆಯ ನಿರ್ಣಯವನ್ನು ಉಲ್ಲಂಸಿದ್ದು ಇಂದು ಖಂಡನೀಯ ಎಂದರು.
ಕೇಂದ್ರ ಸರ್ಕಾರ ವಯನಾಡು, ಶಿರೂರು ಗುಡ್ಡಕುಸಿತ ಪ್ರಕರಣಗಳನ್ನು ನೆಪವಾಗಿರಿಸಿಕೊಂಡು ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ವರದಿ ಜಾರಿ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಆಕ್ಷೇಪಣೆ ಸಲ್ಲಿಸುವ ಅವ ಇನ್ನೂ ಇರುವಾಗಲೆ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಒತ್ತುವರಿ ಸಮಸ್ಯೆಯನ್ನು ಮುಂದಿಟ್ಟುಕೊಂಡೆ ಚುನಾವಣೆಗಳಲ್ಲಿ ಗೆದ್ದ ಬಿಜೆಪಿ ಸಂಸದರು, ರೈತ ನಾಯಕ, ಹುಟ್ಟು ಹೋರಾಟಗಾರ ರೆನಿಸಿಕೊಂಡವರು ಈಗ ಮೌನವಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯಾಕೆ ಪರಿಹಾರ ಕೊಡಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೆಂದ್ರ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ವಾಣಿಜ್ಯ ಉದ್ದೇಶಗಳಿಗಾಗಿ, ರೆಸಾರ್ಟ್, ಶಿಕ್ಷಣ ಸಂಸ್ಥೆಗಳಿಗಾಗಿ ವನ್ಯಜೀವಿ ಅರಣ್ಯ ವ್ಯಾಪ್ತಿಯ ಭೂಮಿಯನ್ನು ಕಬಳಿಸಿರುವವರ ಬಗ್ಗೆ ಅರಣ್ಯ ಇಲಾಖೆ ಮೌನವಹಿಸಿರುವುದಾದರೂ ಏಕೆ ? ಬಡವರು ಒಂದೋ ಎರಡೋ ಎಕರೆ ಸಾಗುವಳಿ ಮಾಡಿಕೊಂಡಿರುವವರ ಮೇಲೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ಸಲಿಗೆ ಬಂದ ಬೆಳೆಯನ್ನು ನಾಶ ಮಾಡಲಾಗುತ್ತಿದೆ ಇದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಅರಣ್ಯ ಇಲಾಖೆ ವರ್ತನೆ ಮತ್ತು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಮಂಜುನಾಥ ಗೌಡರು ಕಸ್ತೂರಿ ರಂಗನ್ ವರದಿ ವಾಸ್ತವಿಕ ಅಂಶಗಳನ್ನು ಒಳಗೊಂಡಿಲ್ಲ. ಇಂತಹ ವರದಿ ಜಾರಿಗೆ ನಮ್ಮ ವಿರೋಧವಿದೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, 2015ರ ಆಚೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿರುವಂತಹ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕೆಲೆಬ್ಬಿಸಬಾರದು ಎಂದು ಹೇಳಲಾಗಿದೆ. ಜತೆಗೆ ಇವರೆಲ್ಲ ಬಡವರೇ ಆಗಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಪ್ರತಿಷ್ಟಿತರ ಒತ್ತುವರಿ ತೆರೆವು ಮಾಡುವ ಬದಲಿಗೆ ಬಡವರನ್ನು ಟಾರ್ಗೆಟ್ ಮಾಡಿದ್ದಾರೆ. ಅವರು ಮಾನವೀಯತೆ ತೋರುವ ಬದಲಿಗೆ ದರ್ಪ ತೋರುತ್ತಿರುವುದು ವಿಚಿತ್ರವಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಕೆ ಮರಿಯಪ್ಪ,ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಜಿಲ್ಲಾ ಕಾಂಗ್ರೇಸ್ ಪದಾಕಾರಿಗಳಾದ ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಕೃಷ್ಣ, ರಾಘವೇಂದ್ರ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿದ್ದರು.