ಸುದ್ದಿಲೈವ್/ಶಿವಮೊಗ್ಗ
ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಶಾಸಕ ಚೆನ್ನಬಸಪ್ಪ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಯುವ ಕಾಂಗ್ರೆಸ್ ಮುಖಂಡ ಮಂಜು ಪುರಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಅಶಾಂತಿ ಸೃಷ್ಟಿಸಿರುವುದು, ಕೋಮುಗಲಭೆ ಎಬ್ಬಿಸಿರುವುದೇ ಶಾಸಕ ಚೆನ್ನಬಸಪ್ಪ ಅವರ ಇದುವರೆಗಿನ ಸಾಧನೆ. ಶಾಸಕರಾಗಿ ಈವರೆಗೆ ಹೇಳಿಕೊಳ್ಳುವಂತಹ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇಂತಹ ವ್ಯಕ್ತಿ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಶಾಸಕರು ಮೊದಲು ನಗರದ ಅಭಿವೃದ್ಧಿಯ ಕಡೆಗೆ ಗಮನ ಕೊಡಲಿ ಎಂದು ಮಂಜು ಪುರಲೆ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಲಾಟರಿ ಶಾಸಕರಾಗಿರುವ ಚನ್ನಬಸಪ್ಪನವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಹಿರಿಯ ಬಿಜೆಪಿ ನಾಯಕರನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಇಂತಹ ಹೀನ ಹೇಳಿಕೆಗಳನ್ನು ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಸಿದ್ದರಾಮಯ್ಯನವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅವರು ನೀಡಿರುವ ಯೋಜನೆಗಳು ಪ್ರತಿಯೊಬ್ಬರ ಜನಮಾನಸದಲ್ಲೂ ಉಳಿದಿವೆ. ತಮ್ಮ ಇದುವರೆಗಿನ ರಾಜಕೀಯ ಜೀವನವನ್ನು ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಕಳೆದಿದ್ದಾರೆ. ಇಂತಹ ವ್ಯಕ್ತಿಯ ವರ್ಚಸ್ಸನ್ನು ಸಹಿಸಲಾರದೇ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡಿ ಅವರ ಘನತೆಗೆ ಕುಂದು ತರುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಮರೆಯಬಾರದು. ಸಿದ್ದರಾಮಯ್ಯ ಅವರ ವಿರುದ್ಧ ಏಕಾಏಕಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ನೋಡಿದರೆ ಅವರು ಬಿಜೆಪಿಯ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಮೇಲ್ಬೋಟಕ್ಕೆ ಕಂಡು ಬರುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಷ್ಟೇ ಆತುರ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ಮುರುಗೇಶ್ ನಿರಾಣಿ ಅವರಿಗೆ ನೀಡಲು ಏಕಿಲ್ಲ ಎಂದು ಮಂಜು ಪುರಲೆ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ಮೊದಲಿನಿಂದಲೂ ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಾ ಬಂದಿದ್ದು, ಈಗಲೂ ಅದನ್ನೆ ಮುಂದುವರಿಸಿದ್ದಾರೆ. ಜನಾದೇಶ ನೀಡಿದ ಸರ್ಕಾರ ಬೀಳಿಸುವ ಪ್ರಯತ್ನ ನಡೆಸಿದರೆ ಜನರಿಂದಲೇ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.