ಸುದ್ದಿಲೈವ್/ಶಿವಮೊಗ್ಗ
ಮುಜರಾಯಿ ಇಲಾಖೆಯ ಯಡವಟ್ಟು ಮುಂದುವರೆದಿದೆ. ಒಂದು ವೇಳೆ ಶಾಸಕರ ಉಪವಿಭಾಗಾಧಿಕಾರಿಗಳು ಮದ್ಯ ಪ್ರವೇಶಿಸದ ಇದ್ದಿದ್ದರೆ ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತಿತ್ತು ಗೊತ್ತಾಗುತ್ತಿರಲಿಲ್ಲ.
ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರ ವರ್ಚಸ್ಸಿನಿಂದ ದೇವಸ್ಥಾನ ಬೆಳೆದಿದೆ. ದೇವಸ್ಥಾನ ಇಂದು ಬೆಳೆದು ನಿಂತಿದೆ ಮತ್ತು ಅಭಿವೃದ್ಧಿ ಹೊಂದಿದೆ ಎಂದರೆ ಸರ್ಕಾರದ ಪ್ರಯತ್ನ ಶೂನ್ಯವೇ. ಆದರೆ ಅರ್ಚಕ ಶಂಕರಾನಂದ ಜೋಯಿಸ್ ಅವರ ಪ್ರಯತ್ನ ಮತ್ತು ಅವರ ಭಕ್ತರ ಶ್ರಮದಿಂದ ದೇವಸ್ಥಾನ ಬೆಳೆದಿದೆ.
ಸರ್ಕಾರ ಅಭಿವೃದ್ಧಿ ಪಡಿಸದೆ ಹುಂಡಿಗೆ ಬಿದ್ದ ಕಾಸಿನ ಮೇಲೆ ಕಣ್ಣಿಟ್ಟಿದೆ. ಈ ಕಾಸು ಅರ್ಚಕರ ಸಂಬಳ, ದೇವಸ್ಥಾನದ ಹೂವು ಹಣ್ಣು ನಿರ್ವಹಣೆಗೆ ಖರ್ಚಾಗಬೇಕು. ಈ ಖರ್ಚನ್ನ ಹುಂಡಿ ಕಾಸಿನಲ್ಲೇ ತೆಗೆಯಬೇಕು. ಆದರೆ ಸರ್ಕಾರ ಹಣ ಎತ್ತುಕೊಂಡು ಹೋಯಿತೆ ಹೊರತು ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಈ ಕುರಿತು ಅರ್ಚಕ ಶಂಕರಾನಂದ ಜೋಯಿಸ್ ವಾಟ್ಸಪ್ ಸಂದೇಶ ಇಂದು ತಲ್ಲಣ ಹುಟ್ಟಿಸಿದೆ. ವಾಟ್ಸಪ್ ಸಂದೇಶ ಹೀಗಿದೆ 'ಕೋಟೆ ರಸ್ತೆಯಲ್ಲಿ ಶ್ರೀ ಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ನಮಗೆ 2023 ಅಕ್ಟೋಬರ್ ತಿಂಗಳಿನಿಂದ ಕೊಡಬೇಕಾದ ನಿತ್ಯಕಟ್ಲೆ, ಹೆಚ್ಚುಕಟ್ಲೆ ದೇವಸ್ಥಾನದ ಸಂಭಾವನೆ ಇತ್ಯಾದಿ ಖರ್ಚುವೆಚ್ಚಗಳನ್ನು ಕೊಡದೇ ಶಿವಮೊಗ್ಗ ತಾಲೂಕು ಕಛೇರಿಯ ಅಧಿಕಾರಿಗಳು ಕಳೆದ 10 ತಿಂಗಳಿನಿಂದ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ನಮ್ಮ ಮನವಿಮೇರೆಗೆ ಶಿವಮೊಗ್ಗ ವಿಭಾಗಾಧಿಕಾರಿ ಗಳು ಜರೂರು ಕ್ರಮ ವಹಿಸಲು ಆದೇಶ ನೀಡಿದ್ದರೂ
ಈ ವಿಷಯವಾಗಿ ಅನೇಕಬಾರಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಲಿಖಿತ ಮನವಿ ವಾಟ್ಸಾಪ್ ಮಾಡಿಕೊಂಡರೂ ಯಾವುದೇ ರೀತಿಯ ಸೂಕ್ತ ಅಧಿಕೃತ ಮಾಹಿತಿಯನ್ನಾಗಲಿ ಹಿಂಬರಹವಾಗಲೀ ಕೊಡದೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ. ದೇವಸ್ಥಾನದ ಹುಂಡಿ ಹಣವನ್ನು ಭಕ್ತಾದಿಗಳಿಗೆ ಅರ್ಚಕರಿಗೆ ಗೊತ್ತಾಗದಂತೆ ದೇವಸ್ಥಾನದ ಖರ್ಚು ವೆಚ್ಚ ಗಳಿಗೆ ಬಳಸದೆ ನಿಶ್ಚಿತ ಠೇವಣಿ ಇಟ್ಟು ಮೋಸ ಅನ್ಯಾಯ ಮಾಡುತ್ತಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೂಡ ಮಾಡಿರುವುದಿಲ್ಲ ಎಂದು ದೂರಲಾಗಿದೆ.
ಅರ್ಚಕರು ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಾರದು ಎಂದು ನೋಟೀಸ್ ಕೊಟ್ಟಿರುತ್ತಾರೆ. ಅನಿವಾರ್ಯವಾಗಿ
ಈ ಎಲ್ಲ ಕಾರಣದಿಂದಾಗಿ ಅಮ್ಮನವರ ಪ್ರೇರಣೆಯಿಂದ ದಿನಾಂಕ 09-08-2024 ಶುಕ್ರವಾರದಿಂದ ಪ್ರತಿ ನಿತ್ಯ ಲೋಕಕಲ್ಯಾಣಾರ್ಥವಾಗಿ ಸಂಕಲ್ಪಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಪೂಜೆಯನ್ನು ಮಾಡಿ, ಅನಿರ್ದಿಷ್ಟಾವಧಿಯವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲು ನಿರ್ಧರಿಸಿದೆ ಆದ್ದರಿಂದ ಸಮಸ್ಯೆಗಳು ನಿವಾರಣೆ ಆಗುವವರೆಗೆ ಸನ್ಮಾನ್ಯ ಭಕ್ತಾದಿಗಳು ಸಾರ್ವಜನಿಕರು ಸಹಕರಿಸಬೇಕಾಗಿ ಕೋರುತ್ತೇವೆ ಎಂಬ ಸಂದೇಶ ತಲ್ಲಣ ಮೂಡಿಸಿದೆ.
ಶಾಸಕ ಚೆನ್ನಬಸಪ್ಪ, ಎಸಿ ಸತ್ಯನಾರಾಯಣ ಅವರ ಪ್ರಯತ್ನದಿಂದ ಪ್ರಕರಣ ಬಹುತೇಕ ಸುಖಾಂತ್ಯಗೊಂಡಿದೆ. ಸುಖಾಂತ್ಯದ ವಿಷಯವಲ್ಲ. ಈ ರೀತಿಯ ಅವ್ಯವಸ್ಥೆಗೆ ಕಾರಣವೇನು? ಎಲ್ಲವೂ ಅಧಿಕಾರಿಗಳ ಬಳಿ ಹೋಗಿ ಕೈಮುಗಿದು ನಿಲ್ಲಬೇಕೆಂದರೆ ಅದು ನಿಯಮದಲ್ಲಿ ಇದೆಯಾ? ಸರ್ಕಾರಿ ಅಧಿಕಾರಿಗಳ ಸಂಬಳ ಹಿಡಿದಿಟ್ಟರೆ ಹೇಗಿರುತ್ತೆ? ಪರಿಸ್ಥಿತಿಯನ್ನ ಅವಲೋಕಿಸದೆ ಮುಂದುವರೆದರೆ ಮತ್ತಷ್ಟು ತಲೆನೋವಾಗುವುದು ಖಚಿತ