ಐತಿಹಾಸಿಕ ಕೆರೆಗೆ ಬಾಗಿನ-ಕುಬಟೂರು ಶಾಲೆಗೆ ಸಚಿವರಿಂದ ದೇಣಿಗೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಬಟೂರು ಕೆರೆ ಭರ್ತಿಯಾಗಿದ್ದು,  ಐತಿಹಾಸಿಕ ಕುಬಟೂರು ಕೆರೆಗೆ ಸಚಿವ ಮಧು ಬಂಗಾರಪ್ಪ ಇಂದು ಬಾಗಿನ ಅರ್ಪಿಸಿದ್ದಾರೆ. 


ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕುಟುಂಬ ಸಮೇತರಾಗಿ ಬಾಗಿನ ಅರ್ಪಣೆ ಮಾಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ವಗ್ರಾಮ ಕುಬಟೂರು ಆಗಿದೆ.


ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ'


ನಂತರ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕರು, ಉಳ್ಳವರು ಮನಸ್ಸು ಮಾಡಿದರೆ, ಸರ್ಕಾರಿ ಶಾಲೆಗಳ ಭವಿಷ್ಯ ಬದಲಿಸಬಹುದು. ಈ ಬದಲಾವಣೆಗೆ ಕುಬಟೂರು ಗ್ರಾಮದ ಸರ್ಕಾರಿ ಶಾಲೆಯಿಂದ ಮುನ್ನುಡಿ ಬರೆಯಲಾಗಿದೆ' ಎಂದು ಹೇಳಿದರು.


ಸರ್ಕಾರದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಶುಕ್ರವಾರ ಇಲ್ಲಿನ ಸೊರಬ ತಾಲ್ಲೂಕಿನ ಸ್ವಗ್ರಾಮ ಕುಬಟೂರು ಕೆರೆಗೆ ಬಾಗಿನ ಅರ್ಪಿಸಿ, ಬಳಿಕ ಕುಬಟೂರು ಸರ್ಕಾರಿ ಶಾಲಾಭಿವೃದ್ಧಿಗೆ ₹10 ಲಕ್ಷ ವೈಯಕ್ತಿಕವಾಗಿ ದೇಣಿಗೆ ನೀಡುವ ಕಾರ್ಯಕ್ರಮಕ್ಕೆ, ಪತ್ನಿ ಅನಿತಾ ಮಧುಬಂಗಾರಪ್ಪ ಅವರ ಜತೆಗೂಡಿ ಚಾಲನೆ ನೀಡಿ ಮಾತನಾಡಿದರು‌.


ಶಾಲೆಗೆ ನೀಡಿದ ದೇಣಿಗೆ ಮೊತ್ತ ₹10 ಲಕ್ಷ ಇರಬಹುದು. ಆದರೆ, ಇದು ಮುಂದಿನ ದಿನದಲ್ಲಿ ಕೋಟಿಗೆ ವಿಸ್ತರಣೆ ಆಗಲಿದೆ. ಇದರಿಂದ, ಸರ್ಕಾರಿ ಶಾಲೆಗಳ ಏಳಿಗೆ ಸಾಧ್ಯವಾಗಲಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯ ಸಕಾರಗೊಂಡಿದೆ ಎಂದರು.


ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ₹೧ ಸಾವಿರ ಕೋಟಿ ದೇಣಿಗೆ ಹರಿದು ಬರುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.


ಸಂಜೆ ತರಗತಿಗೆ ಒತ್ತುಕೊಡಿ


ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಅದೇ, ರೀತಿ ಶಿಕ್ಷಕರು ಸಹ ಕನ್ನಡ ಭಾಷೆಯಲ್ಲಿ ಪಕ್ವವಾಗಬೇಕು. ಗ್ರಾಮಾಂತರ ಭಾಗ ಸೇರಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಜೆ ತರಗತಿ ನಡೆಸಲು ಶಿಕ್ಷಕರು ಮುಂದಾಗಬೇಕು. ಇದರಿಂದ, ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.


ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಯಾವುದೇ ಹಕ್ಕು ಪೋಷಕರಿಗಿಲ್ಲ. ಆದ್ದರಿಂದ,  ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು- ಮಧುಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, 


ಮಕ್ಕಳು ಏನಂತಾರೆ


ಮಧು ಅಂಕಲ್ ಶಾಲೆಗೆ ಟಿವಿ ಕೊಟ್ಟಿದ್ದಾರೆ. ಕುಸಿ ಆಗುತ್ತಿದೆ ಎಂದು ಒಂದನೇ ತರಗತಿಯ ವಿದ್ಯಾರ್ಥಿನಿ ಅನುಶ್ರೀ ಹೇಳಿದರೆ, ಮೂರನೇ ತರಗತಿಯ ವಿದ್ಯಾರ್ಥಿ ಎಂ.ಎ ಮಾಲತೇಶ್ ಮಾತನಾಡಿ ತುಂಬಾ ಕುಸಿ ಆಗುತ್ತಿದೆ. ಟಿವಿಯ ಮೂಲಕ ಪಾಠಗಳನ್ನು ಕೇಳಿಸಿಕೊಳ್ಳುವ ಜತೆಗೆ ನೋಡಬಹುದು ಎಂದು ಹೇಳಿದರು. 


ಕಾರ್ಯಕ್ರಮದಲ್ಲಿ  ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಎಸ್ ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಬಎಂ.ಡಿ.ಶೇಖರ್, ದಯಾನಂದ ಕಲ್ಲೆ, ನಾಗರಾಜ ಗೌಡ, ಗಣಪತಿ, ನಾಗರಾಜ, ಅರುಣ್ ಕುಮಾರ್, ರಾಜಶೇಖರ, ಮಂಜುನಾಥ, ಹುಚ್ಚಪ್ಪ, ಪ್ರಕಾಶ್ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close