ಸುದ್ದಿಲೈವ್/ಸೊರಬ ಆಗಸ್ಟ್, 11:
ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವಂತೆ ಪಿಎಸ್ಐ ಹೆಚ್ ಏನ್ ನಾಗರಾಜ್ ಹೇಳಿದರು.
ಇಂದು ಪಟ್ಟಣದ ಪೊಲೀಸ್ ಇಲಾಖೆಯ ಆವರಣದಲ್ಲಿ ಸೆಪ್ಟೆಂಬರ್ 07ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್ 16 ನಡೆಯಲಿರುವ ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಸೌಹಾರ್ಧಯುತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಕರೆಯಲಾದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವ ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಎಲ್ಲಾ ರೀತಿಯ ಸಿದ್ಧತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹೊಸದಾಗಿ ಸೂಕ್ಷ್ಮಯುತವಾದ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ ಎಂದರು.
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯೋಜಕರೇ ಸಂಪೂರ್ಣ ಹೊಣೆ ಹೊರಬೇಕು. ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು, ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ ಎಂದರು.
ಈ ಸಂದರ್ಭ ದಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗೇಶ್, ಲೋಕೇಶ್, ರಾಘವೇಂದ್ರ ಅವರು ಉಪಸ್ಥಿತರಿದ್ದರು.