ಪಿಜಿ, ಹೋಮ್ ಸ್ಟೇ ಹಾಗೂ ಖಾಸಗಿ ವಸತಿ ನಿಲಯಗಳ ಮಾಲೀಕರಿಗೆ ಪೊಲೀಸ್ ಇಲಾಖೆಯ ನಿರ್ದೇಶನವೇನು?



ಸುದ್ದಿಲೈವ್/ಶಿವಮೊಗ್ಗ


ಇಂದು ಶಿವಮೊಗ್ಗದ ಡಿಎಆರ್ ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ನೇತೃತ್ವದಲ್ಲಿ ಪಿಜಿ(ಪೇಯಿಂಗ್ ಗೆಸ್ಟ್), ಹೋಮ್ ಸ್ಟೇ ಮತ್ತು ಖಾಸಗಿ ವಸತಿ ನಿಲಯ ಮಾಲೀಕರ ಮತ್ತು ವ್ಯವಸ್ಥಾಪಕರ ಸಭೆ ನಡೆಸಿ ಹಲವು ಸೂಚನೆ ನೀಡಿದ್ದಾರೆ.


1) ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳನ್ನು ನಡೆಸುವವರು ಸ್ಥಳೀಯ ಸಂಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ  ಪರವಾನಿಗೆ ಮತ್ತು ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳುವುದು. 


2) ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವವರ ಗುರುತಿನ ಚೀಟಿ (ಫೋಟೋ ಐಡಿ ಕಾರ್ಡ್) ಯನ್ನು ಪಡೆದುಕೊಂಡು, ಅವರ ಪೂರ್ವಾಪರವನ್ನು ಪರಿಶಿಲಿಸಿ ನಂತರ ಉಳಿದುಕೊಳ್ಳಲು ಅನುಮತಿಸುವುದು ಮತ್ತು ಸದರಿಯವರ ಮಾಹಿತಿಯನ್ನು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನಮೂದು ಮಾಡುವುದು. ಮಾಹಿತಿ ರಿಜಿಸ್ಟರ್ ಅನ್ನು ಕನಿಷ್ಠ 05 ವರ್ಷಗಳ ವರೆಗೆ ಸುರಕ್ಷಿತವಾಗಿಡುವುದು ಹಾಗೂ ತಿಂಗಳಿಗೊಮ್ಮೆ ಸದರಿ  ವಿವರವನ್ನು  ಸರಹದ್ದಿನ ಪೊಲೀಸ್ ಠಾಣೆಗೆ ಸಲ್ಲಿಸುವುದು.  



3) ಸುರಕ್ಷತೆಯ ದೃಷ್ಠಿಯಿಂದ ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳ ಒಳ ಮತ್ತು ಹೊರ ಭಾಗ ಕಾಣುವ ರೀತಿಯಲ್ಲಿ ಹಾಗೂ ನೈಟ್ ವಿಷನ್ ಇರುವಂತಹ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಕನಿಷ್ಠಪಕ್ಷ 03 ತಿಂಗಳ ವರೆಗೆ ಸಂಗ್ರಹಣಾ ಸಾಮರ್ಥ್ಯವಿರುವ ಹಾರ್ಡ್ ಡಿಸ್ಕ್ ಗಳನ್ನು ಅಳವಡಿಸಿರಬೇಕು ಹಾಗೂ ಸಿಸಿ ಟಿವಿ ಕ್ಯಾಮೆರಾದ ಲೈವ್ ಸ್ಟ್ರೀಮಿಂಗ್ ಗಮನಿಸಲು ಮಾನಿಟರ್ ಗಳನ್ನು ಇಟ್ಟುಕೊಳ್ಳುವುದು ಸೂಕ್ತ.


4) ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳಲ್ಲಿ 20 ಕ್ಕಿಂತ ಹೆಚ್ಚು ಜನರು ಉಳಿದುಕೊಂಡಿದ್ದಲ್ಲಿ ಕಡ್ಡಾಯವಾಗಿ ಭದ್ರಾತಾ ಸಿಬ್ಬಂಧಿಗಳನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಭದ್ರತಾ ಸಿಬ್ಬಂಧಿಗಳ ಪೂರ್ವಾಪರ ಪರಿಶೀಲಿಸಿ ಅಧಿಕೃತ ನೋಂದಾಯಿತ ಸಂಸ್ಥೆಗಳ ಭದ್ರತಾ ಸಿಬ್ಬಂಧಿಗಳನ್ನು ನೇಮಿಸಿಕೊಳ್ಳುವುದು. 


5)  ಸಂಬಂಧಪಟ್ಟ ಪೊಲೀಸ್ ಠಾಣೆಗಳವರು ತಮ್ಮ ಸರಹದ್ದಿನ ವ್ಯಾಪ್ತಿಗೆ ಒಳಪಡುವ ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳಲ್ಲಿ ಬೀಟ್ ಬುಕ್ ಗಳನ್ನು ನಿರ್ವಹಿಸಿ ಕಡ್ಡಾಯವಾಗಿ ಬೀಟ್ ಜಾರಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು ಹಾಗೂ  ಪೊಲೀಸ್ ಠಾಣೆ / ಠಾಣಾಧಿಕಾರಿ / ಬೀಟ್ ಸಿಬ್ಬಂಧಿಗಳವರ ಹೆಸರು ಮತ್ತು  ಫೋನ್ ನಂಬರ್ ಗಳನ್ನು ಪಿಜಿ /  ಹೋಂ ಸ್ಟೇ / ಖಾಸಗೀ ವಸತಿ ನಿಲಯಗಳ ನೋಟೀಸ್ ಬೋರ್ಡ್ ನಲ್ಲಿ ಪ್ರದರ್ಶಿಸುವಂತೆ ತಿಳಿಸಿದರು. 


6) ಯಾವುದೇ ಸಣ್ಣ ಪುಟ್ಟ ಘಟನೆಗಳು ಜರುಗಿದರೂ ಸಹಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಪೊಲೀಸ್ ಠಾಣೆ  / ERSS – 112 ತುರ್ತು ಸಹಾಯವಾಣಿಗೆ ಕರೆ ಮಾಡಿ. 


7) ಹೊರ ರಾಜ್ಯದವರು ಉಳಿದುಕೊಂಡಿದ್ದಲ್ಲಿ ಅವರ ಮೂಲ ವಿಳಾಸದ ಗುರುತಿನ ಚೀಟಿ / ಫೋಟೋ ಐಡಿ ಕಾರ್ಡ್ ಹಾಗೂ ಇತರೆ ಯಾವುದಾದರೂ  ಅಧಿಕೃತ ದಾಖಲೆಗಳನ್ನು ಪಡೆದುಕೊಂಡು, ಅವರ ಸಂಪೂರ್ಣ ವಿವರವನ್ನು ಮತ್ತು ಇಲ್ಲಿಗೆ ಬಂದಿರುವ ಉದ್ದೇಶವನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡುವುದು. 


8) ವಿಶೇಷವಾಗಿ ಮಹಿಳಾ ವಸತಿ ನಿಲಯಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ವಿಶೇಷ ಮುತುವರ್ಜಿ ವಹಿಸಿ ನೋಂದಣಿ / ರಿಜಿಸ್ಟರ್ ನಿರ್ವಹಣೆ, ಸಿಸಿ ಟಿವಿ ಕ್ಯಾಮೆರಾ ಗಳ ಅಳವಡಿಕೆ ಮತ್ತು ಭದ್ರತಾ ಸಿಬ್ಬಂಧಿಗಳನ್ನು ನೇಮಿಸಿಕೊಳ್ಳಬೇಕು ಎಂದು ಹೇಳಿದರು.


ಸಭೆಯಲ್ಲಿ  ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ –ಎ ಉಪ ವಿಭಾಗ,   ಸುರೇಶ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ –ಬಿ ಉಪ ವಿಭಾಗ,  ನಾಗರಾಜ್, ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ,  ಗೋಪಾಲ ಕೃಷ್ಣ ಟಿ ನಾಯ್ಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ  ಪಿಜಿ (ಪೇಯಿಂಗ್ ಗೆಸ್ಟ್), ಹೋಂ ಸ್ಟೇ ಮತ್ತು ಖಾಸಗೀ ವಸತಿ ನಿಲಯಗಳ ಮಾಲೀಕರು  ಹಾಗೂ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close