ಮಂಗಳವಾರ, ಆಗಸ್ಟ್ 13, 2024

ಪುನರ್ ವಿಂಗಡಣೆ ನಂತರ ಪಾಲಿಕೆ ಚುನಾವಣೆ-ಸಚಿವರಿಗೆ ಹೆಚ್ ಸಿ ಯೋಗೀಶ್ ಮನವರಿಕೆ



ಸುದ್ದಿಲೈವ್/ಶಿವಮೊಗ್ಗ


ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೇಶ್ ರವರು ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಪುನರ್ ವಿಂಗಡಣೆ ಮಾಡಿದ ನಂತರ ಚುನಾವಣೆಯನ್ನು ನಡೆಸಬೇಕೆಂದು  ರಾಜ್ಯ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ರವರಿಗೆ ಮನವಿ ಸಲ್ಲಿಸಿ,


ಇಂದು ಬೆಂಗಳೂರಿನಲ್ಲಿ ಶಿವಮೊಗ್ಗ ನಗರದ ಕುರಿತು ವಿವರಿಸಿ  ಮನವಿ ನೀಡಿದರು. ಇದನ್ನು ಆಲಿಸಿದ ನಗರಾಭಿವೃದ್ಧಿ  ಸಚಿವ ಭೈರತಿ ಸುರೇಶ್ ಕೂಡಲೇ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ ಪರಿಶೀಲಿಸುವುದಲ್ಲದೇ ಅನುಕೂಲವಾಗುವಂತೆ ಕ್ರಮಕೈಗೊಳ್ಳುವುದಾಗಿ  ಭರವಸೆಯನ್ನು ನೀಡಿದರು.


ಶಿವಮೊಗ್ಗ ಮಹಾನಗರ ಪಾಲಿಕೆಯು ಕೇವಲ 35 ವಾರ್ಡ್ ಗಳಿಂದ ಸೇರಿದ್ದಾಗಿದೆ. ಪ್ರತಿ ವಾರ್ಡಿನಲ್ಲೂ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಮತದಾರರು ಇದ್ದಾರೆ. ಶಿವಮೊಗ್ಗ ನಗರವು ಈಗ ಅಗಾಧವಾಗಿ ಉತ್ತಮ ರೀತಿಯಲ್ಲಿ ಬೆಳೆದಿದ್ದು, ಶಿವಮೊಗ್ಗದ ನೂತನ ವಿಮಾನ ನಿಲ್ದಾಣವು ಸಹ ನಗರ ಪ್ರದೇಶದಿಂದ ಹೊರಗಿದೆ. 


ಅನೇಕ ರೀತಿಯ ನೂತನ ಕೈಗಾರಿಕಾ ಉದ್ಯಮಗಳು ಕೂಡ ಹೊರವಲಯದಲ್ಲಿಯೇ  ನಡೆಯುತ್ತಿದ್ದು, ಶಿವಮೊಗ್ಗ ನಗರದ ಹೊರವಲಯದಲ್ಲಿ ಸುಸಜ್ಜಿತವಾದ ಬಡಾವಣೆಗಳು ಕೂಡ ನಿರ್ಮಾಣವಾಗಿವೆ.  ಇವುಗಳಿಗೆ ಮೂಲಭೂತ ಸೌಕರ್ಯಗಳನ್ನು  ಒದಗಿಸಲು ಮಹಾನಗರ ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಶಿವಮೊಗ್ಗ ನಗರದ ಹೊರವಲಯದ ಬಡಾವಣೆಗಳ ನಿವಾಸಿಗಳು ಶಿವಮೊಗ್ಗ ನಗರದ ಮತದಾರರೇ ಆಗಿರುತ್ತಾರೆ ಎಂಬುದಿಲ್ಲಿ ವಿಶೇಷ. 


ಶಿವಮೊಗ್ಗ ನಗರದ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಮಹಾನಗರ ಪಾಲಿಕೆಯ ಆದಾಯವು ಕೂಡ ಹೆಚ್ಚಾಗುವುದರ ಜೊತೆಗೆ ಈಗಾಗಲೇ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಮಾರು 11 ವಾರ್ಡ್ ಗಳು ಅಭಿವೃದ್ಧಿಯಾಗಿದ್ದು ಜನಸಂಖ್ಯೆಯು ಹೆಚ್ಚುತ್ತಿರುವುದರಿಂದ ಆರು ತಿಂಗಳ ಹಿಂದಿನಿಂದಲೇ ಪುನರ್ ವಿಂಗಡನೆ ಮಾಡಬೇಕೆಂದು ಸರ್ಕಾರಕ್ಕೆ ಮನವಿಯನ್ನು ಸಹ ಮಾಡಲಾಗಿತ್ತು ಎಂದು ಹೆಚ್.ಸಿ.ಯೋಗೇಶ್ ರವರು ನೀಡಿರುವ ಮನವಿಯಲ್ಲಿದೆ.


ಶಿವಮೊಗ್ಗ ನಗರದ ವ್ಯಾಪ್ತಿಯನ್ನು ಅಧಿಕಗೊಳಿಸಿದ ನಂತರ ಪುನರ್ ವಿಂಗಡನೆ ಅಡಿಯಲ್ಲಿ ನಗರದ ಹೊರವಲಯದ ಭಾಗಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡರೆ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದ ಬಹಭಾಗವನ್ನು  ಅಭಿವೃದ್ಧಿಪಡಿಸಲು ಸಾಧ್ಯ.  ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪುನರ್ ವಿಂಗಡಣೆ ಆದ ನಂತರವೇ ಚುನಾವಣೆಯನ್ನು ಮಾಡಿದರೆ ಶಿವಮೊಗ್ಗ ನಗರಕ್ಕೆ ಅನುಕೂಲವಾಗುತ್ತದೆಂದು ಯೋಗೇಶ್ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 


ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್ , ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ