ಕಾಂಗ್ರೆಸ್ ನಾಯಕರ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ


ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವ ಮತ್ತು ಪೂರ್ವಯೋಚಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಇಂದು ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.


ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರು ರಾಜ್ಯಪಾಲರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ಇದು ಖಂಡನೀಯ ಎಂದು ಪ್ರತಿಭಟನಕಾರರು ತಿಳಿಸಿದರು.


ಈಗಾಗಲೇ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ.ಅಲ್ಲದೇ ರಾಜ್ಯಪಾಲರು ಕೂಡ ತನಿಖೆಗೆ ಒಪ್ಪಿಗೆ ನೀಡಿದ್ದಾರೆ. ಈಗಿದ್ದರೂ ಕೂಡ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಮೇಲೆ ಮುಗಿಬಿದ್ದಿರುವುದು ಶೋಷಿತ ಸಮುದಯದ ವಿರೋಧಿ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದರು.


ರಾಜ್ಯಪಾಲರ ವಿರುದ್ಧ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿನಿಂದನೆ ಕೇಸ್‌ಗಳನ್ನು ದಾಖಲಿಸಬೇಕಾಗಿದೆ. ಪರಿಶಿಷ್ಟ ಜನಾಂಗಕ್ಕೆ ಸೇರಬೇಕಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಕೂಡ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಹೊಣೆ ಎಂದು ಹೇಳಿಕೆ ನೀಡಿರುವ ಮತ್ತು ಬಾಂಗ್ಲಾದ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ ಎಂದಿರುವ ಐವಾನ್ ಡಿಸೋಜ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಜಮೀರ್ ಅಹಮ್ಮದ್, ಕೃಷ್ಣೇ ಬೈರೇಗೌಡ, ದಿನೇಶ್ ಗುಂಡುರಾವ್, ನಂಜೇಗೌಡ ಅವರ ವಿರುದ್ಧ ಜಾತಿ ನಿಂದನೆ ಹಾಗೂ ಗುಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಧನಂಜಯಸರ್ಜಿ, ಮಾಜಿ ಶಾಸಕ ಅಶೋಕ್ ನಾಯ್ಕ್, ಸುರೇಖಾ ಮುರಳೀಧರ್, ಜಗದೀಶ್, ಎಸ್.ದತ್ತಾತ್ರಿ, ನಾಗರಾಜ್, ಐಡಿಯಲ್ ಗೋಪಿ, ಶಿವಾನಂದ್, ಜ್ಞಾನೇಶ್ವರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯಿತ್ರಿಮಲ್ಲಪ್ಪ, ಸುಮಲತಾ, ರಶ್ಮಿ ಮತ್ತು ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಇದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close