ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ



 ಸುದ್ದಿಲೈವ್/ಸೊರಬ


ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ದಂಡಾವತಿ ಬ್ಲಾಕ್‍ನಲ್ಲಿರುವ ನದಿಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.  


ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಜೂ.5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುವುದು ಕಷ್ಟಕರವಾಗಿದೆ. ಅವರ ವಾಹನದಲ್ಲಿ ಹಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಆದ್ದರಿಂದ ಅವರು ಭೂಮಿಗೆ ತೆರಳದೇ ಅಲ್ಲೇ ಉಳಿಯುವಂತಾಗಿದೆ. ಎರಡು ಬಾರಿ ಯಶಸ್ವಿಯಾಗಿ ಗಗನಯಾತ್ರೆ ಮಾಡಿದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಮೂರನೇ ಬಾರಿಗೆ ಮತ್ತೋರ್ವ ಖಗೋಳ ವಿಜ್ಞಾನಿ ಬುಚ್ ವಿಲ್ಮೋರ್ ಅವರೊಂದಿಗೆ ಭೂಮಿಗೆ ಜೂನ್ 14ರಂದು ವಾಪಾಸ್ಸಾಗಬೇಕಿತ್ತು. ಆದರೆ, ಈಗಾಗಲೇ ಎರಡು ತಿಂಗಳು ಹೆಚ್ಚುವರಿಯಾಗಿದೆ ಎಂದು ತಿಳಿಸಿದರು.


ಖಗೋಳಾಸಕ್ತರಿಗೆ ಸಾಮಾನ್ಯವಾದ ಪ್ರವಾಸದಂತೆ ಬಾಹ್ಯಕಾಶಕ್ಕೆ ಕರೆದುಕೊಂಡು ಹೋಗಿ ಅಂತಾರಾಷ್ಟ್ರೀಯ ಬಾಹ್ಯಕಾಶದಲ್ಲಿ ಕೆಲ ದಿನಗಳು ಉಳಿದು ಪುನಃ ಭೂಮಿಗೆ ಹಿಂದಿರುಗುವ ರೋಮಾಂಚನ ನೀಡುವ ಉದ್ದೇಶದಿಂದ ಯೋಜನೆ ರೂಪಿತವಾಗಿತ್ತು. ಇದರಿಂದ ಖಗೋಳಾಸಕ್ತರಿಗೆ ಮತ್ತಷ್ಟು ಮಾಹಿತಿ ಲಭ್ಯವಾಗುತ್ತಿತ್ತು. ಪ್ರಾಯೋಗಿಕವಾಗಿ ನಡೆದ ಯೋಜನೆಯಲ್ಲಿ ಸುನಿತಾ ವಿಲಿಯಮ್ಸ್ ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಗೆ ಹಿಂದಿರಗಬೇಕು. ದೇಶಕ್ಕೆ ಮತ್ತಷ್ಟು ಕೀರ್ತಿ ತರಬೇಕು ಎಂದು ಪ್ರಾರ್ಥಿಸಿ ಪವನಸುತ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ಸುಮನಾ ಬಿ. ಗೌಡ, ಜೆ.ಸಿ. ಮುರಳೀಧರ ಗುಡಿಗಾರ್, ರಾಮಚಂದ್ರ ಆಚಾರ್, ನಿರಂಜನಗೌಡ ಹಳೇಸೊರಬ, ಶಾಂತಕುಮಾರ್ ಮರೂರು, ಎಂ.ಎಸ್. ಸಂಜಯ, ಅರ್ಚಕ ಭಾರ್ಗವ ಗೋಖಲೆ ಸೇರಿದಂತೆ ಇತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close