ಸೋಮವಾರ, ಜುಲೈ 22, 2024

ತೋಟಗಾರಿಕೆ ಉಪನಿರ್ದೇಶಕರ ಮನೆಯಲ್ಲಿ ಪತ್ತೆ ಆಗಿದ್ದು ಕಂತೆ ಕಂತೆ ಹಣ, ಚಿನ್ನಾಭರಣ



ತೋಟಗಾರಿಕೆ ಇಲಾಖೆಯ ಉಪನಿರ್ದೇಶಕನ ಮನೆಯಲ್ಲಿ ಪತ್ತೆಯಾದ ಕಂತು ಕಂತು ಹಣ


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಕೃಷಿನಗರದಲ್ಲಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿಯಲ್ಲಿ ಕಂತೆ ಕಂತೆ ಹಣ, ಚಿನಾಭರಣ, ಬೆಳ್ಳಿ, ಚರಾಸ್ತಿ ಸ್ಥಿರಾಸ್ಥಿ ಪತ್ತೆಯಾಗಿದೆ. ಆದರೆ ಇವರ ಮೇಲಿನ ದಾಳಿಯ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ. 


ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ತಮ್ಮ ಬಲ್ಲ ಮೂಲಗಳಿಂದ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ 13(2) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. 


ಪ್ರಕಾಶ್ ಮನೆ ಮತ್ತು ಮನೆಯಲ್ಲಿ ಪತ್ತೆಯಾದ ಕಂತು ಕಂತು ಹಣ ಮತ್ತು ಒಡವೆ


ಪ್ರಕಾಶ್.ಜಿ.ಎನ್. ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ರವರು ಅಕ್ರಮ ಆಸ್ತಿಗಳಿಸಿರುವ ಪ್ರಕರಣದ ತನಿಖೆ ಕೈಗೊಂಡು ಶ್ರೀ ಪ್ರಕಾಶ್ ಜಿ.ಎನ್ ರವರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ದಿ:19/07/2024 ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ಪ್ರಕಾಶ್ ಜಿ.ಎನ್ ರವರಿಗೆ ಸಂಬಂದಿಸಿದಂತೆ 1 ಖಾಲಿ ನಿವೇಶನ, 2 ಮನೆಗಳು, 2.8 ಎಕರೆ ಕೃಷಿ ಜಮೀನು ಅಂದಾಜು ಸ್ಥಿರಾಸ್ಥಿ ಮೌಲ್ಯ ರೂ 1,57,00,000/- ಕಂಡು ಬಂದಿರುತ್ತದೆ. ಹಾಗೂ ಅವರ ವಾಸದ ಮನೆಯಲ್ಲಿ ರೂ 38,32,630/- ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 5,20,000/-ರೂ  ಮೌಲ್ಯದ  ವಾಹನಗಳು, ಅಂದಾಜು 11,30,000/-ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 12,86,500/- ನಗದು ಹಣ ಪತ್ತೆಯಾಗಿರುತ್ತದೆ. 


ನಂತರ ಈ ತನಿಖೆಯನ್ನು ಮುಂದುವರೆಸಿದ್ದು, ದಿ:20/07/2024 ರಂದು ಪ್ರಕಾಶ್ ಜಿ.ಎನ್ ರವರ ಪತ್ನಿ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್‍ನ್ನು ಶೋಧನೆ ಮಾಡಲಾಗಿ ಈ ಬ್ಯಾಂಕ್ ಲಾಕರ್‍ನಲ್ಲಿ ರೂ,32,06,000/- ನಗದು ಹಣ ಮತ್ತು ಅಂದಾಜು ರೂ 18,48,200/- ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿರುತ್ತದೆ. ಈ ಅಧಿಕಾರಿಯು ಅಂದಾಜು 2,05,23,330/- ರೂ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಹಾಗೂ ಅವರ ಮನೆ ಮತ್ತು ಲಾಕರ್ ನಲ್ಲಿ  ಪತ್ತೆಯಾದ ನಗದು ರೂ 44,06,000/- ಗಳನ್ನು  ತನಿಖೆ ಸಂಬಂದ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ಹೆಚ್.ಎಸ್.ಸುರೇಶ್ ಪೊಲೀಸ್ ನಿರೀಕ್ಷಕರು, ಕ.ಲೋ ಶಿವಮೊಗ್ಗ ಇವರು ತನಿಖೆಯನ್ನು ಮುಂದುವರೆಸಿರುತ್ತಾರೆ. 


 ಈ ದಾಳಿ ಸಮಯಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಹಾಗೂ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ-https://www.suddilive.in/2024/07/blog-post_227.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ