ಅಪ್ರತಿಮ ಪರಿಸರ ಪ್ರೇಮಿ ಬಿ.ವೆಂಕಟಗಿರಿ ರಾವ್ ಇನ್ನಿಲ್ಲ

ಸುದ್ದಿಲೈವ್/ಶಿವಮೊಗ್ಗ

ಅಪ್ರತಿಮ ಪರಿಸರ ಪ್ರೇಮಿ ಬಿ.ವೆಂಕಟಗಿರಿ ರಾವ್ ಅವರು ಇಂದು ಮಧ್ಯಾಹ್ನ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ತಮ್ಮ ಪರಿಸರ ರಕ್ಷಣೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪರಿಸರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಇವರು ತಮ್ಮ ಮನೆಯಂಗಳದಲ್ಲೇ ವಿವಿಧ ವೈಜ್ಞಾನಿಕವಾಗಿ ನಕ್ಷತ್ರ ವನ, ನವಗ್ರಹ ವನ ನಿರ್ಮಿಸಿದ್ದರಲ್ಲದೆ ನೂರಾರು ಜಾತಿಯ ಅಮೂಲ್ಯ ಗಿಡ ಮೂಲಿಕೆ, ಫಲ-ಪುಷ್ಪ ಗಿಡಗಳನ್ನು ಬೆಳೆಸಿ ಇತರರಿಗೆ ಮಾದರಿಯಾಗಿದ್ದರು.

ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ, ಅದರ ಮಹತ್ವಗಳ ಬಗ್ಗೆ ಅರಿವಿ ಮೂಡಿಸುವ ಕಾಯಕದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ತಮ್ಮ ಜೀವಿತದ ಕೊನೆಯವರೆಗೂ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದರು.
ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ಪರಿಸರ ಸಲಹೆಗಾರರಾಗಿದ್ದ ಇವರು ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಉದ್ಯಾನವನ, ಅರಣ್ಯೀಕರಣ, ಹಸಿರೀಕರಣ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ನಾಟಿ ವೈದ್ಯರ ಕುರಿತು ಓಷಧಿ ಗಿಡ ಮೂಲಿಕೆಗಳ ಸವಿವರ ಸಹಿತದ ಪುಸ್ತಿಕೆಯನ್ನು ಹೊರತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಖ್ಯಾತ ವಕೀಲರಾದ ಅಶೋಕ ಜಿ.ಭಟ್ಟರ ನಿಕಟವರ್ತಿಗಳಾಗಿದ್ದ ಇವರು ಅರಣ್ಯ ಕಾನೂನು, ಸಾಮಾಜಿಕ ಅರಣ್ಯಗಳ ಉಪಯೋಗ ಸಾಧಕ-ಭಾದಕಗಳ ಕುರಿತು ಯಾವಾಗಲೂ ಚರ್ಚಿಸುತ್ತಿದ್ದರು.
ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಗಿಡ ಗಂಟಿಗಳ ಹೆಸರು ಇವರ ನಾಲಿಗೆಯಲ್ಲಿ ನಲಿದಾಡುತ್ತಿದ್ದುದು ಪರಿಸರದ ಬಗ್ಗೆ ಇವರು ಹೊಂದಿದ್ದ ಆಸಕ್ತಿ ಮತ್ತು ಕಾಳಜಿಯನ್ನು ತೋರಿಸುತ್ತದೆ ಎಂದು ಮೃತರ ನಿಕಟವರ್ತಿಗಳಲ್ಲೊಬ್ಬರಾದ ಡಾ.ಬಾಲಕೃಷ್ಣ ಹೆಗಡೆ ಅವರು ಸ್ಮರಿಸುತ್ತಾರೆ.

ಶಿವಮೊಗ್ಗದ ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಬಿ. ದಯಾನಂದ ಅವರು ವೆಂಕಟಗಿರಿಯವರ ಮನೆಗೇ ಹೋಗಿ ಸನ್ಮಾನಿಸಿದಗದೂ ಮೃತರ ಪರಿಸರ ಸೇವೆಗೆ ಸಂದ ಗೌರವವಾಗಿದೆ.ಶಿವಮೊಗ್ಗ ಹಾಗೂ ಸುತ್ತ ಮುತ್ತಲಿನ ಶಾಲಾ ಕಾಲೇಜುಗಳು ತಮ್ಮ ಆವರಣಗಳಲ್ಲಿ ಹಸಿರೀಕರಣಕ್ಕಾಗಿ ಇವರ ಮಾರ್ಗದರ್ಶನ ಪಡೆದಿದ್ದರು.

ಸಂತಾಪ

ಪರಿಸರ ತಜ್ಞ ವೆಂಕಟಗಿರಿಯವರ ನಿಧನಕ್ಕೆ ಸಂತಾಪ ಸೂಚಿಸಿದ ಅವರ ನಿಕಟವರ್ತಿಗಳಾದ ಅಶೋಕ ಜಿ.ಭಟ್ ಮತ್ತು ಡಾ.ಬಾಲಕೃಷ್ಣ ಹೆಗಡೆ, ವೆಂಕಟಗಿರಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ನಾಡು ಉತ್ಕೃಷ್ಟ ಪರಿಸರ ತಜ್ಞನನ್ನು ಕಳೆದುಕೊಂಡಂತಾಗಿದೆ. ಮೃತರು ನಡೆದಾಡುವ ಸಸ್ಯ ವಿಶ್ವವಿದ್ಯಾಲಯದಂತಿದ್ದರು. ಓರ್ವ ಅಗತ್ಯ ಸಸ್ಯ ಸಾಮ್ರಾಜ್ಯದ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ-https://suddilive.in/archives/17297

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close