ಸುದ್ದಿಲೈವ್/ಶಿವಮೊಗ್ಗ
ಆಗಸ್ಟ್ ತಿಂಗಳ ಒಳಗೆ 7 ನೇ ವೇತನ ಆಯೋಗ ಜಾರಿ ಮಾಡುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿಪ್ರಾಯ ಪಟ್ಟರು
ಅವರು ನಗರದ ಕುವೆಂಪು ರಂಗ ಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ನೂತನ ಜನಪ್ರತಿನಿಧಿಗಳಿಗೆ ಸನ್ಮಾನ, ಸಂಘದ ನವೀಕೃತ ಭವನದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಎಲ್ಲಾ ರೀತಿಯ ಶಿಕ್ಷಣ ಸೌಲಭ್ಯಗಳಿವೆ. ಹೈವೆ, ಏರ್ ವೇ, ರೈಲ್ವೆ ಸಂಪರ್ಕಗಳನ್ನ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮ ವಹಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ಕಡೆ ಪ್ರಯತ್ನ ಮಾಡಲಾಗುವುದು ಎಂದರು.
ಆಗಸ್ಟ್ ಒಳಗೆ ಏಳನೆ ವೇತನ ಆಯೋಗ ಯಥಾವತ್ತು ಜಾರಿಗೆ ತರಲು ಪ್ರಯತ್ನ ಮಾಡಲಾಗುವುದು. ಅದರ ಜೊತೆಗೆ 2006 ರ ನಂತರದಲ್ಲಿ ನೇಮಕಾತಿಗೊಂಡ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ನಿಂದ ಓಪಿಎಸ್ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪೋಷಕರೇ ಪ್ರೇರಣೆಯಾಗಬೇಕು. ಅವರೂ ಸಹ ಜೀವನದ ಹಾಗೂ ಶೈಕ್ಷಣಿಕ ಪರೀಕ್ಷೆಯನ್ನ ಎದುರಿಸಿ ಈ ಸ್ಥಾನಕ್ಕೆ ಬಂದಿದ್ದಾರೆ. ಸರ್ಕಾರಿ ಹುದ್ದೆ ಸುಲಭದ ನೌಕರಿಯಲ್ಲ. ಎಲ್ಲರಿಗೂ ಉತ್ತರ ಕೊಡಬೇಕಾಗುತ್ತದೆ ಎಂದರು.
ಇದರ ನಡುವೆ ದಕ್ಷ ಆಡಳಿತವನ್ನೂ ನೀಡಬೇಕಾಗುತ್ತದೆ. ನೌಕರರು ಒತ್ತಡದ ನಡುವೆಯೂ ಕುಟುಂಬಕ್ಕೆ ಸಮಯ ನೀಡಬೇಕಾಗಿದೆ ಎಂದ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯಲ್ಲೂ ಇಲ್ಲಿನ ನೌಕರರ ಭವನ ನಿರ್ಮಿಸಿದಂತೆ ನಿರ್ಮಿಸಬೇಕೆಂದು ತಿಳಿಸಿದರು.
ನೂತನ ಎಂಎಲ್ ಸಿ ಡಾ.ಧನಂಜಯ ಸರ್ಜಿ ಮಾತನಾಡಿ, ಜೀವನಕ್ಕೆ ಶಿಕ್ಷಣ ಅವಶ್ಯಕ, ಅದರಜೊತೆಗೆ ಬುದ್ದಿ ಅವಶ್ಯಕತೆ ಇದೆ. ಇದೇ ಬುದ್ದಿ ಶಕ್ತಿ ಜೀವನವನ್ನ ನಿರ್ಧರಿಸುತ್ತದೆ. ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರ, ಆತ್ಮವಿಶ್ವಾಸ, ಹಸಿವಿನ ಮಹತ್ವ ತಿಳಿಸಿಕೊಡಬೇಕು. ಆತ್ಮಕ್ಕೆ ಖುಷಿ ನೀಡುವುದು ಸೇವೆ. ಈ ಸೇವೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು ಎಂದರು.
ನಿಮ್ಮ ಆಶೀರ್ವಾದದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ತಂದು ಕೊಟ್ಟೀದ್ದೀರಿ. ನಿಮ್ಮ ಋಣ ತೀರಿಸುತ್ತೇನೆ ಎಂದ ಡಾ.ಸರ್ಜಿ, ಕಲಿಯುಗದಲ್ಲಿ ಸಂಘಟನೆಗೆ ಶಕ್ತಿ. ಇದನ್ನು ಕಟ್ಟುವುದು, ಬೆಳೆಸಿಕೊಂಡು ಹೋಗುವುದು ಕಷ್ಟ. ಸರಕಾರಿ ನೌಕರರಿಗಾಗಿ ದೊಡ್ಡ ಕಲ್ಯಾಣ ಮಂದಿರ ನಿರ್ಮಿಸಲಾಗಿದೆ. ಅತಿ ಕಡಿಮೆ ದರದಲ್ಲಿ ನಿವೇಶನ ನೀಡಲಾಗುತ್ತಿದೆ. ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಮಕ್ಕಳು ಬೆಳೆಯುತ್ತಾ ಹೋದಂತೆ ಹೋಲಿಕೆ ಪ್ರಾರಂಭವಾಗುತ್ತದೆ. ಇದರ ಬದಲು ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಮಾತನಾಡಿ, ನಾನೂ ಸರಕಾರಿ ನೌಕರನ ಮಗ. ಅವರು ಓದಿಸಿದ್ದರಿಂದ ನಾನು ಈ ಸ್ಥಾನದಲ್ಲಿದ್ದೇನೆ. ಯಶಸ್ಸು ಎನ್ನುವುದು ತಲೆಗೆ ಹೋಗಬಾರದು. ಅದು ಹೋದರೆ ಡಿಗ್ರೇಡೇಶನ್ ಪ್ರಾರಂಭವಾಗುತ್ತದೆ.
ನಮ್ಮ ಕೊನೆ ಉಸಿರಿನ ತನಕ ಶ್ರಮ ಹಾಕುತ್ತಿರಬೇಕು. ನಿಮ್ಮ ಪೋಷಕರು ಮಾಡಲು ಸಾಧ್ಯವಿಲ್ಲದ್ದನ್ನು ನಿಮ್ಮ ಮೂಲಕ ಮಾಡಿಸಲು ಅವರ ಇಚ್ಚೆ ಇರುತ್ತದೆ.
ಎಂಜಿನಿಯರ್, ಮೆಡಿಕಲ್ ಆದರೆ ಜೀವನ ಸೆಟ್ಲ್ ಆಗುತ್ತದೆ ಎಂಬ ಭಾವನೆ ಬೇಡ. ಅದಕ್ಕೂ ಹೊರತಾಗಿ ವಿವಿಧ ವೃತ್ತಿಗಳಿವೆ. ಇಂದಿನ ಸಮಾಜದಲ್ಲಿ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ನಿಮ್ಮನ್ನು ಮೇಲೆತ್ಯಿದವರನ್ನು ಎಂದಿಗೂ ಒದೆಯಬೇಡಿ. ನಮ್ಮ ದೇಶ ಮೌಲ್ಯಾಧಾರಿತ ದೇಶ. ಎಲ್ಲದರಲ್ಲಿಯೂ ನಾವು ಮುನ್ನಡೆ ಸಾಧಿಸಿದ್ದೇವೆ. ಮೆಟಿರಿಯಲಿಸ್ಟಿಕ್ ಪ್ರಪಂಚದಲ್ಲಿ ಅದನ್ನು ಮರೆಯುತ್ತಿದ್ದೇವೆ.ಇದು ಆಗಬಾರದು. ದೇಶದ ಬೆಳವಣಿಗೆ ತರುಣರ ಪಾತ್ರ ಮುಖ್ಯ. ನಿಮ್ಮಿಂದ ಸಮಾಜಕ್ಕೆ ಒಳ್ಳೆಯದಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಿಇಒ ಸುಧಾಕರ್ ಲೋಖಂಡೆ ಹಾಗೂ ಇತರರು ಉಪಸ್ಥಿತರಿದ್ದರು. ಎಸ್‌ಎಸ್ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ-https://suddilive.in/archives/17599