ಸುದ್ದಿಲೈವ್/ಸೊರಬ
ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಟ ಶಿವರಾಜ್ ಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪ ಅಭಿಮಾನಿಗಳು ಮುತ್ತಿಗೆ ಹಾಕಿ ಗೂಂಡಾ ವರ್ತನೆ ಮಾಡಿದ್ದನ್ನು ಖಂಡಿಸಿ ಭಾನುವಾರ ಪಟ್ಟಣದ ಪುರಸಭೆ ಮುಂಭಾಗದ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕುಮಾರ್ ಬಂಗಾರಪ್ಪ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಲೋಕಸಭಾ ಚುನಾವಣೆಯ ಫಲಿತಾಂಶದ ತರುವಾಯ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸ ಮೇಲೆ ಶಿವರಾಜ್ ಕುಮಾರ್ ಅಭಿಮಾನಿಗಳು ಎಂದು ನೂರಾರು ಬಾಡಿಗೆ ಗೂಂಡಾಗಳು ಏಕಾಏಕಿ ನುಗ್ಗುವ ಮೂಲಕ ದಾಂಧಲೆಯ ಪ್ರವೃತ್ತಿ ಎಸಗಿರುವುದು ನಾಚಿಗೆಗೇಡಿನ ಸಂಗತಿಯಾಗದೆ. ಕೃತ್ಯವನ್ನು ಬಿಜೆಪಿಯಿಂದ ಉಗ್ರವಾಗಿ ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲಿನ ಹತಾಶೆಯಿಂದ ಇಂತಹ ಬೇಜವಾಬ್ದಾರಿ ಕೃತ್ಯ ಎಸಗಿರುವುದು ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ. ಸಭ್ಯತೆಗೆ ಹೆಸರಾದ ಮಾಜಿ ಸಿಎಂ ಎಸ್. ಬಂಗಾರಪ್ಪ ಮತ್ತು ಡಾ. ರಾಜ್ ಕುಮಾರ್ ಕುಟುಂಬದ ಹಿನ್ನೆಲೆ ಇರುವವರು ಇಂತಹ ಕೀಳು ಮಟ್ಟದ ಕೆಲಸಕ್ಕೆ ಇಳಿಯಬಾರದು ಎಂಬ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ ಎಂದರು.
ಬಿಜೆಪಿ ಮುಖಂಡ ವಕೀಳ ಸೋಮಶೇಖರ್ ತಾಳಗುಪ್ಪ ಮಾತನಾಡಿ, ನಟ ಶಿವರಾಜ್ ಕುಮಾರ್ ಅವರಿಗೆ ನಮ್ಮಂತಹ ಪ್ರೇಕ್ಷಕರಿಂದ ಅಭಿಮಾನಿ ಬಳಗವಾಗಿದೆ ಜೊತೆಗೆ, ಕುಮಾರ್ ಬಂಗಾರಪ್ಪ ಅವರಿಗೂ ಸಹ ಅಭಿಮಾನ ಬಳಗವಿದೆ ಎನ್ನುವುದನ್ನು ಅವರು ಅರಿಯಬೇಕು. ಚುನಾವಣೆ ಸಂದರ್ಭದಲ್ಲಿ ಪತ್ನಿಯ ಪರವಾಗಿ ಅವರು ಚುನಾವಣೆ ಪ್ರಚಾರ ಮಾಡಬೇಕೆ ವಿನಃ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುವ ಕೆಲಸಕ್ಕೆ ಕೈ ಹಾಕಬಾರದು. ಕುಮಾರ್ ಬಂಗಾರಪ್ಪ ಅವರು ಮನೆಯ ಹಿರಿಯ ಸದಸ್ಯರಾಗಿ ಬುದ್ದಿ ಮಾತು ಹೇಳಿದ್ದಾರೆ. ಮನೆಗಳಿಗೆ ನುಗ್ಗಿ ದಾಂಧಲೆ ಮಾಡುವ ಕೆಲಸಗಳು ಪುನರಾವರ್ತನೆಯಾದರೆ ಬಿಜೆಪಿ ಯಿಂದ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ನಟರಾಜ್ ಉಪ್ಪಿನ, ಬಿಜೆಪಿ ಮುಖಂಡರಾದ ದೇವೇಂದ್ರಪ್ಪ, ಶಿವಕುಮಾರ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಜಾನಕಪ್ಪ ಒಡೆಯರ್, ಅಭಿಷೇಕ್ ಬೆನ್ನೂರು, ವಿನಯ್ ಶೇರ್ವಿ, ರಾಜು ಮಾವಿನಬಳ್ಳಿಕೊಪ್ಪ, ಪ್ರಸನ್ನ ಶೇಟ್, ಶಿವರಾಜ್ ರಿತ್ತಿ, ಕೃಷ್ಣಮೂರ್ತಿ, ರಾಜು ಬಡಗಿ, ವಿಶ್ವನಾಥ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ-https://suddilive.in/archives/16558