ಬಿಜೆಪಿಯ ಹೀನಾಯ ಸ್ಥಿತಿಗೆ ತಲುಪಲು ಕಾರಣವೇನು ಎಂದು ಜಗಜಿತ್ ಸಿಂಗ್ ದಲೈವಾಲಾ ವಿವರಣೆ ನೀಡಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಭಯೋತ್ಪಾದಕರು ಎಂಬ ಆರೋಪ ಹೊರಿಸಿ ಅವರ ಮೇಲೆ ಪ್ರಯೋಗಿಸುವ ಅಸ್ತ್ರಗಳನ್ನು ರೈತರ ಮೇಲೆ ಪ್ರಯೋಗಿಸಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಎಂದು ಎಸ್.ಕೆ.ಎಂ. ಅಖಿಲ ಭಾರತ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಹೇಳಿದ್ದಾರೆ.

ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಯಾವುದೇ ಇರಲಿ, ಇದೇ ರಾಜಕಾರಣ ಮುಂದುವರೆದರೆ ದೇಶದಲ್ಲಿ ರೈತರಿಗೆ ಉಳಿಗಾಲವಿಲ್ಲ. ಹೋರಾಟ ಮಾಡುವ ರೈತರನ್ನು ಖಲಿಸ್ತಾನಿ, ಉಗ್ರವಾದಿ ಪಟ್ಟ ಕಟ್ಟುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ತಮ್ಮ ಹಕ್ಕಿಗಾಗಿ ಹೋರಾಡಿದರೆ ಅವರ ಮೇಲೆ ದಮನಕಾರಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ರೈತ ಸಂಘಟನೆಗಳು ಮಾತ್ರ ಪ್ರಸ್ತುತ ಈ ದೇಶದಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡಬಹುದಾಗಿದೆ ಎಂದರು.

ನೀತಿ ಸಂಹಿತೆ ಜಾರಿಯಾದಾಗ ರೈತರು ಹೋರಾಟ ಸ್ಥಗಿತಗೊಳಿಸುತ್ತಾರೆ ಎಂಬ ಭಾವನೆ ಸರ್ಕಾರಕ್ಕಿತ್ತು. ಆದರೂ ಇದೇ ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ರೈತರ ಹೋರಾಟ ಮುಂದುವರೆಸಿ ಎಲ್ಲಾ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ನಮ್ಮ ಬಳಿ ಬಂದು ಮಂಡಿಯೂರಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಇದು ನಮ್ಮ ಒಗ್ಗಟ್ಟಿಗೆ ಸಿಕ್ಕ ಫಲ ಎಂದರು.

ರೈತರು ಯಾವುದೇ ಸರ್ಕಾರದ ವಿರೋಧಿಯಲ್ಲ. ರೈತರ ಮೇಲೆ ಪ್ರಯೋಗಿಸಿದ ಅಸ್ತ್ರಗಳೇ ಬಿಜೆಪಿ ಸರ್ಕಾರಕ್ಕೆ ಮುಳುವಾಯಿತು. ಜನ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಸಮಯದಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದರು. ದೇಶದ ಲೋಕತಂತ್ರ ಮತ್ತು ಸಂವಿಧಾನ ರಕ್ಷಿಸುವ ಕೆಲಸವನ್ನು ಮತದಾನದ ಮೂಲಕ ಮಾಡಿದರು. ಈಗ ರೈತ ಹೋರಾಟದ ಒಗ್ಗಟ್ಟು ಎಲ್ಲಿಯವರೆಗೆ ಕೆಲಸ ಮಾಡಿದೆ ಎಂದರೆ ಬಿಜೆಪಿ ಮೈತ್ರಿ ಪಕ್ಷಗಳೂ ಕೂಡ ಸರ್ಕಾರದ ಒಳಗೆ ನಮ್ಮ ಪರವಾಗಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದಾರೆ ಎಂದರು.

ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಸೂಕ್ತ ದರ ನಿಗದಿಯಾಗಬೇಕು. ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. ಅದಕ್ಕಾಗಿ ಕಾನೂನು ಜಾರಿಗೆ ತರುವವರೆಗೆ ರೈತ ಹೋರಾಟ ನಿಲ್ಲುವುದಿಲ್ಲ. ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ಧವಾಗಿವೆ. ೧೮ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ. ಆದರೆ, ಕೆಲವು ನಿಗದಿಪಡಿಸಿದ ಬೆಂಬಲ ಬೆಲೆ ಉತ್ಪಾದನಾ ವೆಚ್ಚದ ಅರ್ಧಕ್ಕೂ ಸಮವಿಲ್ಲ. ಈ ಅವೈಜ್ಞಾನಿಕ ಬೆಂಬಲ ಬೆಲೆ ನೀತಿಯನ್ನು ನಾವು ವಿರೋಧಿಸುತ್ತೇವೆ.

ಮತ್ತು ಆಶ್ವಾಸನೆ ನೀಡಿದ ಹಾಗೆ ತೊಗರಿ, ಕೊಬ್ಬರಿ, ಇನ್ನಿತರ ಬೆಳೆಗಳಿಗೂ ಕೂಡ ಉತ್ಪಾದನಾ ವೆಚ್ಚ ಆಧರಿತ ಬೆಂಬಲ ಬೆಲೆ ಸರ್ಕಾರ ನಿಗದಿಪಡಿಸಬೇಕು. ನಾವು ಎಲ್ಲರೂ ಒಂದಾದರೆ ಸರ್ಕಾರವೇ ನಮ್ಮ ಬಳಿ ಬರುತ್ತದೆ. ನಮ್ಮ ಪ್ರಾಮಾಣಿಕ ಬೇಡಿಕೆಗಳು ಈಡೇರುತ್ತವೆ ಎಂದರು.

ದಕ್ಷಿಣ ಭಾರತ ರಾಜ್ಯಗಳ ಎಂಎಸ್‌ಪಿ ಕೆಎಂ ಸಂಚಾಲಕ ಕುರುಬೂರು ಶಾಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂಎಸ್‌ಪಿ ನಿಗದಿ ಮಾಡಬೇಕಾದ ಕೇಂದ್ರ ಯಾವುದೇ ನಿರ್ಧಾರ ಮಾಡಿಲ್ಲ. ದೇಶದ ಬೆನ್ನೆಲುಬು ರೈತ ಎನ್ನುತ್ತಾರೆ. ಆ ಬೆನ್ನೆಲುಬು ಮುರಿಯಲು ಹವಣಿಸುತ್ತಿದ್ದಾರೆ ಎಂದರು.

ಸ್ವಾತAತ್ರ‍್ಯ ಬಂದು ೭೫ ವರ್ಷವಾದರೂ ರೈತರ ಬದುಕು ಬದಲಾಗಿಲ್ಲ. ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಮಾಡುಲಾಗುತ್ತಿದೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಸಿರು ಶಾಲು ಹಾಕಿ ರಿಯಲ್ ಎಸ್ಟೇಟ್ ದಂಧೆ ಮಾಡುವವರು ನಮ್ಮೊಳಗಿದ್ದಾರೆ. ಅವರಲ್ಲಿ ಅನೇಕರು ಹಾಳಾಗಿ ಹೋಗಿದ್ದಾರೆ. ಪ್ರಾಮಾಣಿಕವಾಗಿ ಹೋರಾಟ ಮಾಡುವ ರೈತರು ಉಳಿಯುತ್ತಾರೆ ಎಂದರು.
ಮೊನ್ನೆ ಕೇಂದ್ರದಿAದ ಎಂಎಸ್‌ಪಿ ಘೋಷಣೆ ಮಾಡಲಾಗಿದೆ. ಇದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ.

೧೯೬೮ ರಿಂದ ಎಂಎಸ್‌ಪಿ ಘೋಷಣೆಯಾಗುತ್ತಲೇ ಇದೆ. ಏನೂ ಪ್ರಯೋಜನವಾಗುತ್ತಿಲ್ಲ. ಬರಗಾಲದಲ್ಲಿ ರೈತರಿಗೆ ಭಿಕ್ಷಾ ರೂಪದ ಪರಿಹಾರ ನೀಡಲಾಗಿದೆ. ರೈತರಿಗೆ ನೀಡುತ್ತಿದ್ದ ನೆರವಿನ ಹಣವನ್ನು ನೀಡದೆ ಸಿಎಂ ನಿಲ್ಲಿಸಿದ್ದಾರೆ. ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತರು ನಷ್ಟದಿಂದ ಪಾರಾಗಬಹುದು. ರಾಜಕೀಯ, ಜಾತಿ ಬಿಟ್ಟು ಹೋರಾಟ ಮಾಡೋಣ. ರೈತರಿಗಾಗಿ ವಿಶೇಷ ಸಾಲ ನೀತಿ ರೂಪಿಸಬೇಕು.

ತೆಲಂಗಾಣದಲ್ಲಿ ೧೫ ಸಾವಿರ ರೂ. ಪ್ರೋತ್ಸಾಹಧನ ನೀಡಿ ೭ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದಾರೆ. ಅಲ್ಲಿ ಕೂಡ ಕಾಂಗ್ರೆಸ್ ಸರ್ಕಾರವಿದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಹಾಲಿನ ಸಬ್ಸಿಡಿ ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯ ೪ ಸಾವಿರ ರೂ. ಕೂಡ ನಿಲ್ಲಿಸಿದೆ. ಬರಗಾಲ ಪರಿಹಾರ ನೀಡಿಲ್ಲ. ತೆಂಗು ಬೆಳೆಗಾರರ ಬದುಕು ಬೀದಿಗೆ ಬಂದಿದೆ. ಭತ್ತಕ್ಕೆ ಕೂಡ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ರೈತರು ಸಂಘಟನೆ ಗಟ್ಟಿಗೊಳಿಸಿ ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಸರ್ಕಾರ ನಮ್ಮ ಮಾತು ಕೇಳುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕಾರದ ಕೆ.ವಿ. ಬಿಜು, ಅಭಿಮನ್ಯು ಕುಹರ್, ಲಲ್ವಿಂದರ್ ಸಿಂಗ್ ಔಲಾಖ್, ಸುಕ್ಷಿತ್ ಸಿಂಗ್, ಜಾಫರ್ ಖಾನ್, ಪಿ.ಆರ್. ಪಾಂಡ್ಯನ್, ಟಿ.ಎನ್. ರಾಮನ್ ಗೌಡರ್, ವೆಂಕಟೇಶ್ವರರಾವ್, ನರಸಿಂಹನಾಯ್ಡು, ಕರ್ನಾಟಕದ ಎಂ.ಪಿ. ಕರಿಬಸಪ್ಪಗೌಡ, ವೀರನಗೌಡ ಪಾಟೀಲ್, ಮಾಧವ ರೆಡ್ಡಿ, ಚೂನ್ನಪ್ಪ ಪೂಜಾರಿ, ಎನ್.ಹೆಚ್. ದೇವಕುಮಾರ್, ಬಲ್ಲೂರು ರವಿಕುಮಾರ್, ಸಿ.ವಿ.ಲೋಕೇಶ್ ಗೌಡ, ದಿನೇಶ್ ಶಿರಿವಾಳ, ಬಸವರಾಜ್ ಸಂಬೋಳ, ಎಂ. ಈರಣ್ಣ, ಶರಣಪ್ಪ, ಶಿವಕುಮಾರ್, ದೊಡ್ಡ ಅಜ್ಜಯ್ಯ, ಮಹೇಂದ್ರ, ಹೊಯ್ಸಳ ಗಣಪತಿಯಪ್ಪ, ರುದ್ರೇಶ್ ಕಸೆಟ್ಟಿ, ರಾಮಚಂದ್ರಪ್ಪ, ಉಷಾ, ಪಾರ್ವತಿ, ಆರ್ಮುಗಂ, ರಾಜು ಇದ್ದರು.

ಇದನ್ನೂ ಓದಿ-https://suddilive.in/archives/17661

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close