ಸುದ್ದಿಲೈವ್/ಶಿವಮೊಗ್ಗ
ಸಂಸ್ಥೆಯ ಕೆಲಸದಲ್ಲಿದ್ದಾಗ ನಮ್ಮ ಧರ್ಮದ ಯುವತಿಯೊಂದಿಗೆ ಅಡ್ಡಾಡುತ್ತಿದ್ದೀಯ ಎಂಬ ಕಾರಣಕ್ಕೆ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿಯನ್ನ ಬಂಧಿಸಲು ತೆರಳಿದ್ದ ದೊಡ್ಡಪೇಟೆ ಪೊಲೀಸರಿಗೆ ಆರೋಪಿ ತಾಯಿಯಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಆರೋಪಿ ತಾಯಿಯ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನ ಹಿಡಿದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಲಿಯಾಜ್ ನಗರದ ಅನ್ಸಾರಿ ಮಸೀದಿಯ ಬಳಿಯಿರುವ ಎಸ್ ಎಸ್ ಟಿಂಬರ್ ನಲ್ಲಿ ನಂದನ್ ಎಂಬಾತ ಕಂಪನಿಯ ಸಹದ್ಯೋಗಿಯನ್ನ ಕರೆದುಕೊಂಡು ಹೋಗುವ ವೇಳೆ ಅಡ್ಡಗಟ್ಟಿ, ನಮ್ಮ ಧರ್ಮದ ಯುವತಿಯ ಜೊತೆ ಅಡ್ಡಾಡುತ್ತೀಯ ಎಂದು ಥಳಿಸಿದ ಪ್ರಕರಣ ಜೂ.1 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಆನ್ವಯ ತನಿಖೆ ಕೈಗೊಂಡ ಪೊಲೀಸರಿಗೆ ಇಲಿಯಾಜ್ ನಗರದ ಮೊಹಮದ್ ಸೈಮಾನ್ ಎಂಬ ಯುವಕ ಪ್ರಕರಣದಲ್ಲಿ ಆರೋಪಿಯಾಗಿರುವುದನ್ನ ಪತ್ತೆಹಚ್ಚಲಾಗಿತ್ತು. ಪತ್ತೆಹಚ್ಚಿದ ಆರೋಪಿಯನ್ನ ಬಂಧಿಸಲು ಯಾವಾಗ ದೊಡ್ಡಪೇಟೆ ಪೊಲೀಸರು ಇಲಿಯಾಜ್ ನಗರಕ್ಕೆ ಹೋಗಿ ಸೈಮಾನ್ ನನ್ನ ಬಂಧಿಸಲು ಮುಂದಾದಾಗ ಸೈಮಾನ್ ತಾಯಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಏರು ಧ್ವನಿಯಲ್ಲಿ ಮಗನನ್ನಬಿಡುವಂತೆ ಆಕ್ಷೇಪಿಸಿದ್ದರು.
ತಾಯಿಗೆ ಈತನ ಕೃತ್ಯದ ಬಗ್ಗೆ ಪೊಲೀಸರು ತಿಳಿಸಿದರೂ ಸಹ ಕೇಳದೆ ಇದ್ದಾಗ ಸಿಬ್ಬಂದಿಗಳು ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಗೆ ವಿಷಯ ಮುಟ್ಟಿಸಿದ್ದಾರೆ. ಠಾಣ ಪಿಐ ರವಿ ಸಂಗನಗೌಡ ಪಾಟೀಲ್ ಅವರು ಸ್ಥಳಕ್ಕೆ ಬಂದು ಮನವರಿಕೆ ಮಾಡಿದ್ದಾರೆ. ಆದರೆ ಆರೋಪಿ ತಾಯಿಯು ಪೊಲೀಸರನ್ನ ತಳ್ಳಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸರನ್ನ ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಆಕೆಯ ಮೇಲೆ ಸುಮೋಟೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/16538