ಸುದ್ದಿಲೈವ್/ಸೊರಬ
ತಾಲೂಕಿನ ಮೂಡುಗೋಡು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 7 ಲಕ್ಷ ರೂ., ಮೌಲ್ಯದ ಅಡಿಕೆ ಮತ್ತು ಗೇರು ಬೀಜವನ್ನು ಕಳ್ಳರು ದರೋಡೆ ನಡೆಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗ್ರಾಮದ ಜಯಕುಮಾರ್ ಎಂಬುವವರು ಮನೆ ಪಕ್ಕದಲ್ಲಿ ಅಡಿಕೆ ಗೋದಾಮನ್ನು ನಿರ್ಮಿಸಿಕೊಂಡು ತಾವು ಬೆಳೆದ ಸುಮಾರು 200 ಕ್ವಿಂಟಾಲ್ ಸಿಪ್ಪೆ ಅಡಿಕೆ, 10 ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ 17 ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು. ಶುಕ್ರವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ 3 ಲಕ್ಷ ರೂ., ಮೌಲ್ಯದ 15 ಕ್ವಿಂಟಾಲ್ ಒಣ ಸಿಪ್ಪೆ ಗೋಡು ಅಡಿಕೆ, 2.4 ಲಕ್ಷ ರೂ., ಮೌಲ್ಯದ 6 ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ ಸುಮಾರು 1.2 ಲಕ್ಷ ರೂ., ಮೌಲ್ಯದ 10 ಕ್ವಿಂಟಾಲ್ ಗೇರು ಬೀಜವನ್ನು ಕಳ್ಳತನ ಮಾಡಲಾಗಿದೆ. ಜಯಕುಮಾರ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಶಿವಮೊಗ್ಗದ ಬೆಳರಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/14592