ಕ್ಷೇತ್ರದ ಧ್ವನಿಯಾಗುವೆ, ಹರಸಿ: ಗೀತಾ ಶಿವರಾಜಕುಮಾರ

ಸುದ್ದಿಲೈವ್/ಶಿವಮೊಗ್ಗ

ಕ್ಷೇತ್ರದ ಧ್ವನಿಯಾಗಿ ಸಂಸತ್ತಿನಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವೆ. ಆದ್ದರಿಂದ ಇಲ್ಲಿ ಒಂದು ಅವಕಾಶ ಕಲ್ಪಿಸಿಕೊಡಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಹೇಳಿದರು.

ತಾಲ್ಲೂಕಿನ ಆಯನೂರು, ಕುಂಸಿ, ಚೋರಡಿ, ಉಳವಿಯಲ್ಲಿ ಶುಕ್ರವಾರ ಗೀತಾ ಶಿವರಾಜಕುಮಾರ ಪರ ಆಯೋಜಿಸಿದ್ದ ರೋಡ್ ಷೋನಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಎಲ್ಲಾ ವರ್ಗದವರಿಗೆ ವರದಾನವಾಗಿದೆ. ‘ಗ್ಯಾರಂಟಿ’ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮತದಾರರು ಸುಳ್ಳು ವದಂತಿಗಳಿಗೆ ಕಿವಿಕೊಡಕೂಡದು ಎಂದರು.

ಕ್ಷೇತ್ರದ ಸಮಸ್ಯೆಗಳು ಗಮನದಲ್ಲಿವೆ. ಇಲ್ಲಿ, ಬಗರ್ ಹುಕುಂ, ಶರಾವತಿ ಸಂತ್ರಸ್ತರ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ಜೀವಂತವಾಗಿವೆ. ಆ ಎಲ್ಲಾ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ‌. ಆದ್ದರಿಂದ, ಇಲ್ಲಿ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಕೇವಲ ಚುನಾವಣೆಯಲ್ಲಿ ಮತಗಳಿಕೆಯ ರಾಜಕೀಯ ಸ್ವಾರ್ಥದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಿಸಿಲ್ಲ. ಇಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ದುರಾಡಳಿತದ ಫಲವನ್ನು ಉಣ್ಣುತ್ತಿರುವ ರಾಜ್ಯದ ಜನರ ಸಂಕಷ್ಟಗಳ ಹೊರೆಯನ್ನು ತುಸು ಹಗುರುಗೊಳಿಸುವ ಸದಾಶಯದಿಂದ ಈ ಯೋಜನೆಗಳನ್ನು ಘೋಷಿಸಿದ್ದೆವು. ಅದರಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆದ್ದರಿಂದ ಗೀತ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದರು.

ನಟ ದುನಿಯಾ ವಿಜಯ್ ಮಾತನಾಡಿ, ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದರೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಆದ್ದರಿಂದ, ಕ್ಷೇತ್ರದ ರಕ್ಷಣೆಗೆ ಗೀತಾಕ್ಕಗೆ ಮತ ನೀಡಿ ಆಶೀರ್ವದಿಸಿ ಎಂದರು.

ನಟ ಶಿವರಾಜಕುಮಾರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಬೇಕು. ಅದು ಪ್ರಮಾಣಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ. ಇಲ್ಲಿ ಪತ್ನಿ ಗೀತಾ ಉದ್ದೇಶ ಪರಿಶುದ್ಧವಾಗಿದೆ. ಆದ್ದರಿಂದ, ಗೀತಾಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.

ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ-ಧರ್ಮ-ವರ್ಗ ನೋಡದೆ ಜಾರಿಗೊಳಿಸಿದ್ದೇವೆ. ಈ ಯೋಜನೆಗಳು ಅರ್ಹ ಫಲಾನುಭವಿಗಳ ಕೈಸೇರಿವೆ. ಆದ್ದರಿಂದ, ಈ ಋಣ ತೀರಿಸಲು ಗೀತಕ್ಕಗೆ ಮತ ನೀಡಬೇಕು ಎಂದರು.

ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ.ಪಲ್ಲವಿ, ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್, ಬಗರ್ ಹುಕುಂ ಸಮಿತಿ ಮಾಜಿ ಅಧ್ಯಕ್ಷ ಮಸ್ಕರ್ ರಾಜಪ್ಪ, ತುಪ್ಪೂರು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತವೀರ ನಾಯ್ಕ್, ಕೆಪಿಸಿಸಿ ಸದಸ್ಯ ವೈ.ಎ‍ಚ್.ನಾಗರಾಜ, ಟಿ.ನೇತ್ರಾವತಿ, ಚೋರಡಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ರಾಜೇಶ್, ಲೋಹಿತ್ ಬದನಗೋಡು ಸೇರಿ ನೂರಾರು ಕಾರ್ಯಕರ್ತರು ಇದ್ದರು.

ಇದನ್ನೂ ಓದಿ-https://suddilive.in/archives/14095

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close