ಆನ್‌ಲೈನ್ ಫ್ರಾಡ್-ಶಿವಮೊಗ್ಗದಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಶಿವಮೊಗ್ಗದ ಮಹಿಳೆ

ಸುದ್ದಿಲೈವ್/ಶಿವಮೊಗ್ಗ

ಎಲ್ಲಿವರೆಗೆ ಈ ಮೋಸ ಮಾಡೋರು ಇರ್ತಾರೋ ಅಲ್ಲಿವರೆಗೆ ಮೋಸ ಹೋಗುವವರು ಕೂಡ ಇದ್ದೆ ಇರ್ತಾರೆ ಎಂಬ ಮಾತಿದೆ. ಆದ್ರೆ, ಸಾವಿರಾರು ಜನ್ರು ಪ್ರತಿದಿನ ಮೋಸ ಹೋಗುತ್ತಲೇ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಕೂಡ, ಮತ್ತೆ ಮತ್ತೆ ಆನ್ ಲೈನ್ ಮೋಸ ಹೋಗಿ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ.

ಇಲ್ಲೊಬ್ಬ ಯುವತಿ ಕೂಡ ಆನ್ ಲೈನ್ ಮೋಸಕ್ಕೆ ಬಲಿಯಾಗಿದ್ದಾಳೆ. ಟೆಲಿಗ್ರಾಂ ಆ್ಯಪ್ ಮೂಲಕ ಬಂದ ಉದ್ಯೋಗದ ಭರವಸೆ ಅರಸಿಕೊಂಡು ಹೋಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾಳೆ. ಅಷ್ಟಕ್ಕೂ ಏನಿದು ಆನ್ ಲೈನ್ ಫ್ರಾಡ್ ? ಈ ಯುವತಿಗೆ ಮನಿ ಫ್ರಾಡ್ ಆಗಿದ್ದು ಹೇಗೆ ? ಬನ್ನಿ ತಿಳಿಯೋಣ

ಉದ್ಯೋಗ ಅರಸಿ ಆನ್ ಲೈನ್ ಮೊರೆ ಹೋದ ಯುವತಿಯೊಬ್ಬಳ ಕತೆ ಇದು. ಆನ್ ಲೈನ್ ನಲ್ಲಿ ಉದ್ಯೋಗ ಹುಡುಕುತ್ತಾ ಬರೋಬ್ಬರಿ 11,82,208 ರೂ. ಕಳೆದುಕೊಂಡಿದ್ದಾಳೆ. ಇದೆನಪ್ಪಾ ಹೀಗೆ ಅಂತಾ ಹುಬ್ಬೇರಿಸಬೇಡಿ. ಇದು ಆಶ್ಚರ್ಯವಾದರೂ ಸತ್ಯ. ಎಸ್……….ಡ್ರೀಮ್ ಹೊಟೆಲ್ ಗ್ರೂಪ್ ಸಂಸ್ಥೆಯನ್ನು ಪ್ರಮೋಷನ್ ಮಾಡಲು ತಿಳಿಸಿದ್ದ ಆಗಂತುಕರು, ಶಿವಮೊಗ್ಗದ ಈ ಯುವತಿಯಿಂದ ಲಕ್ಷಾಂತರ ಹಣವನ್ನು ಪೀಕಿಸಿಕೊಂಡು ಮರೆಯಾಗಿದ್ದಾರೆ.

ಅಂದಹಾಗೆ, ಶಿವಮೊಗ್ಗದ ಗಾಂಧಿ ಬಜಾರ್ ನ ತುಳಜಾ ಭವಾನಿ ರಸ್ತೆಯಲ್ಲಿರುವ ಈ ಯುವತಿಯೊಬ್ಬರು ಕಳೆದ ಹಲವಾರು ದಿನಗಳಿಂದ ಆನ್ ಲೈನ್ ನಲ್ಲಿ ಕೆಲಸ ಸರ್ಚ್ ಮಾಡುತ್ತಿದ್ದರು. ಇವರಿಗೆ ಟೆಲಿಗ್ರಾಂ ನಲ್ಲಿ ಸ್ವಾತಿ ಮಿಶ್ರಾ ಎಂಬ ಅಪರಿಚಿತ ಟೆಲಿಗ್ರಾಂ ಐಡಿಯಿಂದ ಮೆಸೆಜ್ ಬಂದಿದೆ. ಬಳಿಕ ಅರಬೆಲ್ಲಾ ಎಂಬ ಅಕೌಂಟ್ ನಿಂದ ಡ್ರೀಮ್ ಹೊಟೆಲ್ ಗ್ರೂಪ್ ನ ಪ್ರಮೋಟರ್ ಆಗಿ ಕರ್ತವ್ಯ ನಿರ್ವಹಿಸಲು ಹೇಳಿದ್ದರಂತೆ.

ವೆಬ್ ಸೈಟ್ ನ ಅಡ್ರೆಸ್ ಹಾಗೂ ಅದರ ಐಡಿ ಹಾಗೂ ಪಾಸ್ ವರ್ಡ್ ನೀಡಿದ್ದು, ಅದರಲ್ಲಿನ ಹೊಟೆಲ್ ನ್ನು ಪ್ರಮೋಟ್ ಮಾಡಿ ಮಾಡಿದ ಕೆಲಸಕ್ಕೆ 700 ಕೂಡ ನೀಡಿದ್ದರಂತೆ. ಬಳಿಕ ಇವರಿಗೆ ಕಸ್ಟಮರ್ ಸರ್ವಿಸ್ ಫಾರ್ ಯೂ ಎಂಬ ಟೆಲಿಗ್ರಾಂ ಐಡಿಯಿಂದ 10 ಸಾವಿರ ರೂ. ಹಣ ಹಾಕಲು ತಿಳಿಸಿದ್ದರಿಂದ ಹಣ ಹಾಕಿದ್ದರಂತೆ. ಆ ಬಳಿಕ ಆಗಿದ್ದೇ ಬೇರೆ, ನಿಮಗೆ ಕೆಲಸ ಬೇಕು ಎಂದಾದರೆ, ಹಣ ಹಾಕಿ ಎಂಬ ಸಂದೇಶ ರವಾನೆಯಾಗಿದೆ.

ಈ ವೇಳೆ 15 ಸಾವಿರ, 40 ಸಾವಿರ, 80 ಸಾವಿರ 1 ಲಕ್ಷ ರೂ. ಹಣ ಹೀಗೆ ಬರೋಬ್ಬರಿ 11,57,208 ರೂ. ಹಣ ಪೀಕಿದ್ದು, ಆ ಬಳಿಕವಷ್ಟೇ ಈ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಇಷ್ಟೆಲ್ಲಾ ಆದ ಬಳಿಕ ಉದ್ಯೋಗ ನೀಡುವುದಾಗಿ ಹೇಳಿ, ನಂಬಿಸಿ, ಟೆಲಿಗ್ರಾಂ ಆ್ಯಪ್ ನಲ್ಲೇ ಕೆಲಸವೆಂಬಂತೆ ಟಾಸ್ಕ್ ಗಳನ್ನು ನೀಡಿ ಹಣ ಪೀಕಿದ ಬಳಿಕವಷ್ಟೇ ಯುವತಿಗೆ ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಜೊತೆಗೆ ತನ್ನ ಖಾತೆಯಲ್ಲಿರುವ 20,86,000 ಹಣ ವಿತ್ ಡ್ರಾ ಮಾಡಲು ಕೂಡ ಶೇ. 30 ರಷ್ಟು ಹಣ ಟ್ಯಾಕ್ಸ್ ಕಟ್ಟಲು ಹೇಳಿದಾಗ ದಿವ್ಯ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ಈ ವೇಳೆ, ಮೋಸ ಮಾಡಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿದಿದೆ.

ಒಟ್ಟಾರೆ, ಟೆಲಿಗ್ರಾಂ ನಲ್ಲೇ ಕೆಲಸವೆಂಬಂತೆ, ಟಾಸ್ಕ್ ಗಳನ್ನು ನೀಡಿ ಹಣ ಕಟ್ಟಿಸಿಕೊಂಡು, ಬಳಿಕ ಲಾಭಾಂಶ ನೀಡದೇ ಅಸಲು ಹಣ ನೀಡದೇ ವಂಚನೆ ಮಾಡಿರುವ ಪ್ರಕರಣ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕಂಡು ಬಂದಿದೆ. ಈ ರೀತಿ ಈಗಾಗಲೇ, ಹಲವಾರು ಪ್ರತಿಷ್ಟರು, ವೈದ್ಯರು, ಇಂಜಿನಿಯರ್ ಗಳು ಕೂಡ ಮೋಸ ಹೋಗಿರುವ ಪ್ರಕರಣಗಳು ನಮ್ಮ ಕಣ್ಮುಂದೆ ಇದೆ. ಏನೇಯಾಗ್ಲೀ, ಈಗಲಾದರೂ, ಜನರು ಎಚ್ಚೆತ್ತುಕೊಳ್ಳಬೇಕಿದೆ. ಈ ಮೂಲಕ ತಾವು, ತಮ್ಮ ಕುಟುಂಬದವರು ಕಷ್ಟಪಟ್ಟು ಗಳಿಸಿದ ಹಣ, ಇನ್ಯಾರದ್ದೋ ಬಾಯಿಗೆ ಹಾಕುವುದು ತಪ್ಪಿದಂತಾಗುತ್ತದೆ.

ಇದನ್ನೂ ಓದಿ-https://suddilive.in/archives/14619

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close