ಭದ್ರಾವತಿಯಲ್ಲಿ ರಾಘಣ್ಣ, ಗೀತಕ್ಕ,ಸೊರಬ, ಆನವಟ್ಟಿಯಲ್ಲಿ ಹಿಂದೂ ಹುಲಿ

ಸುದ್ದಿಲೈವ್/ಭದ್ರಾವತಿ/ಸೊರಬ

ಭದ್ರಾವತಿ ಗ್ರಾಮಾಙತರ ಭಾಗದಲ್ಲಿ ಬಿಜೆಪಿಯ ಸಂಸದ ಬಿ.ವೈ ರಾಘವೇಂದ್ರ ಪ್ರಚಾರದಲ್ಲಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಭದ್ರಾವತಿ ಸಿಟಿಯಲ್ಲಿ ರೋಡ್ ಶೋ ನಡೆಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿರುವ ಹಿಂದೂ ಹುಲಿ ಕೆ.ಎಸ್.ಈಶ್ವರಪ್ಪ ಸೊರಬ ಆನವಟ್ಟಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸಾರ್ವತ್ರಿಕ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷ ಭದ್ರಾವತಿ ಮಂಡಲ ಇಂದು ತಾಲ್ಲೂಕಿನ ಕಾಗೆಕೊಡಮಗ್ಗಿ, ತಳ್ಳಿಕಟ್ಟೆ, ಹೊಸಹಳ್ಳಿ ಹಾಗೂ ಕೂಡ್ಲಿಗೆರೆ ಗ್ರಾಮಗಳಲ್ಲಿ ಸಂಸದ ರಾಘವೇಂದ್ರ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ತಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಅಲ್ಲಿ ನೆರೆದಿದ್ದ ಮತದಾರ ಮುಂದೆ ಮುಕ್ತವಾಗಿ ವಿವರಿಸಿದರು..

ಗೀತಕ್ಕ ರೋಡ್ ಶೋ

ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಜೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಸಹಸ್ರಾರು ಕಾರ್ಯಕರ್ತರೊಂದಿಗೆ ರೋಡ್ ಷೊ ನಡೆಸಿದರು.

ರೋಡ್‌ ಷೊನಲ್ಲಿ ಕಾರ್ಯಕರ್ತರು ‘ಗೀತಕ್ಕ’ ಅವರನ್ನು ಬೆಂಬಲಿಸಿ ಎಂದು ಘೋಷಣೆ ಕೂಗುವ ಮೂಲಕ ಮತ ಪ್ರಚಾರ ನಡೆಸಿದರು.

ರೋಡ್‌ ಷೊ ಸಂಜೆ 6 ಕ್ಕೆ ತಾಲ್ಲೂಕಿನ ಬೊಮ್ಮನಕಟ್ಟೆಯಿಂದ ಪ್ರಾರಂಭವಾಯಿತು. ರೋಡ್‌ ಷೊ ಮೂಲಕ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಸಾಗುತ್ತಿದ್ದಾಗ ಮಹಿಳೆಯರು ಆರತಿ ಬೆಳಗುವುದು ಹಾಗೂ ಕಾರ್ಯಕರ್ತರು ಹೂವಿನ ಹಾರ ಹಾಕುವ ಮೂಲಕ ಶುಭ ಕೋರಿದರು.

ರೋಡ್ ಷೋ ಪೇಪರ್ ಟೌನ್- ಚೌಡಮ್ಮನ ದೇವಸ್ಥಾನ, ಕೂಲಿ ಬ್ಲಾಕ್ ಸೆಡ್, ಮೇಲೂರ್ ಸೆಡ್, ಉಜ್ಜಯಿನಿಪುರ,ಸುರ್ಗಿತೋಪು, ಆಂಜನೇಯ ಅಗ್ರಹಾರ, ಜಿಂಕ್ ಲೈನ್ ಮುಖಾಂತರ ತೆರೆದ ವಾಹನದಲ್ಲಿ ಮತಯಾಚನೆ ಕಾರ್ಯ ನಡೆಯಿತು.

ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಗೀತಾ ಶಿವರಾಜಕುಮಾರ ಅವರ ಉತ್ಸಾಹ ಇಮ್ಮಡಿಗೊಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ, ಏನು ಬೇಕಾದರು ಸಾಧಿಸಬಹುದು. ಇಲ್ಲಿನ ವಿಐಎಸ್ ಎಲ್ ಕಾರ್ಖಾನೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಗಾಢವಾಗಿ ಬೇರೂರಿ ನಿಂತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರದ ಹಂತದಲ್ಲಿ ಪರಿಹಾರ ಒದಗಿಸಲು ಮತ ನೀಡಿ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.

ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ಜಿಲ್ಲೆಯ ಸರ್ವೋತೋಮುಖ ಏಳಿಗೆಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಲ್ಕೀಸ್ ಭಾನು ಮಾತನಾಡಿ, ಇಲ್ಲಿನ ಸ್ಥಳೀಯ ಸಮಸ್ಯೆಗಳ ಪರಿಹರಿಸಲು ಶಾಸಕ ಸಂಗಮೇಶ್ ಅವರ ಕೈ ಬಲಪಡಿಸಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಮುಖಂಡರಾದ ಬಿ.ಕೆ.ಮೋಹನ್, ಗಣೇಶ್, ಭದ್ರಾವತಿ ಕಾಂಗ್ರೆಸ್ ಸಂಯೋಜಕ ಬಿಆರ್ ಪಿ ರಮೇಶ್ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸೊರಬದಲ್ಲಿ ಹಿಂದೂ ಹುಲಿ

ಜಿಲ್ಲೆಯ ಮತದಾರರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಗೆಲುವು ಸಾಧಿಸುವುದು ಯಡಿಯೂರಪ್ಪ ಅವರ ಚುನಾವಣಾ ತಂತ್ರಗಾರಿಕೆಯಾಗಿದೆ. ಆದರೆ, ಈ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ದಾದಾಗಿರಿ, ಗೂಂಡಾಗಿರಿ ವಿರುದ್ಧ ತೊಡೆತಟ್ಟಿದ್ದಾರೆ. ತಮಗೆ ಗೆಲುವು ತಂದುಕೊಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳಲು ಚುನಾವಣೆಯ ದಿನ ಎಣಿಸುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಭಾನುವಾರ ಪಟ್ಟಣದ ಆಲೇಕಲ್ ಸಭಾ ಭವನದಲ್ಲಿ ರಾಷ್ಟ್ರ ಭಕ್ತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಿ ಅವರು ಮಾತನಾಡಿ, ಯಡಿಯೂರಪ್ಪ ಕುಟುಂಬದ ಅವರ ಎಲ್ಲಾ ತಂತ್ರ, ಮಂತ್ರಗಳನ್ನು ಬಲ್ಲೆ. ಅವರ ಯಾವುದೇ ಷಡ್ಯಂತ್ರಗಳು ಈ ಚುನಾವಣೆಯಲ್ಲಿ ನೆರವಿಗೆ ಬರುವುದಿಲ್ಲ. ಪ್ರತೀ ತಾಲೂಕಿನಲ್ಲಿಯೂ ತಮ್ಮ ಪರವಾಗಿ ಎಲ್ಲಾ ಪಕ್ಷಗಳ ಮುಖಂಡರು ಹಿಂದಿನಿಂದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ಶಿಕಾರಿಪುರದಲ್ಲಿ ಪ್ರತಿಯೊಂದು ಸಮುದಾಯವು ಕುಟುಂಬ ರಾಜಕಾರಣಕ್ಕೆ ಮಟ್ಟ ಹಾಕಬೇಕೆಂದು ತೊಡೆ ತಟ್ಟಿದ್ದಾರೆ. ನಿರೀಕ್ಷೆಗೂ ಮೀರಿ ತಮಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡು ಯಡಿಯೂರಪ್ಪ ಅವರಿಗೆ ಈಗಾಗಲೇ ನಡುಕ ಪ್ರಾರಂಭವಾಗಿದೆ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/13791

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close