ಶೈಕ್ಷಣಿಕ ಸುದ್ದಿಗಳು

ಸುಗ್ಗಿ ಸಂಭ್ರಮದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮೂಹ

ಸುದ್ದಿಲೈವ್/ಶಿವಮೊಗ್ಗ

ಜಟಕಾ ಕುದುರೆ ಹತ್ತಿ ಪ್ಯಾಟಿಗೋಗುಮಾ, ಜರ್ದಾ ಬೀಡಾ ತಿಂತಾ ಕರಗಾ ನೋಡುಮ್ಮಾ… ಅರೆರೆ, ಈ ಹಾಡು ಇಲ್ಲೆಕೆ ಅಂತೀರಾ, ಕಾರಣ ಇದೆ.

ನಗರದ ಬಾಲರಾಜ್‌ ಅರಸು ರಸ್ತೆಯ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಶತಮಾನೋತ್ಸವ ಮಹಾ ವಿದ್ಯಾಲಯದ ಆವರಣಕ್ಕೆ ಬುಧವಾರ ಬೆಳಗ್ಗೆ ಜಟಕಾ ಕುದುರೆ ಬಂದಿತ್ತು. ಅಲ್ಲಿನ ವಿದ್ಯಾರ್ಥಿನೀಯರು ಈ ಜಟಕಾ ಹತ್ತಿ, ಕಾಲೇಜು ಆವರಣದಲ್ಲಿ ಒಂದು ಸುತ್ತು ಹಾಕುವ ಮೂಲಕ ʼ ಗಜಪತಿ ಗರ್ವಭಂಗʼ ಚಿತ್ರದ ಈ ಹಾಡು ಗುನುಗಿದರು. ಇದಕ್ಕೆ ಕಾರಣವಾಗಿದ್ದು ಸುಗ್ಗಿ ಸಂಭ್ರಮ.

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಸುಗ್ಗಿ ಸಂಭ್ರಮ ಮತ್ತು ದೀಪದಾನ ಕಾರ್ಯಕ್ರಮ ಅತ್ಯಂತ ಸಂಭ್ರಮದಲ್ಲಿ ಜರುಗಿತು.ಸುಗ್ಗಿ ಸಂಭ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಮಹಾವಿದ್ಯಾಲಯದ ಆವರಣವು ಕಬ್ಬು, ಬಾಳೆ ಕಂದುಗಳ ಜತೆಗೆ ಬಣ್ಣ ಬಣ್ಣದ ಕಾಗದದ ತೋರಣಗಳ ಮೂಲಕ ಭರ್ಜರಿ ಶೃಂಗಾರ ಗೊಂಡಿತ್ತು. ವಿದ್ಯಾಲಯದ ಆವರಣದಲ್ಲಿ ರಂಗೋಲಿಯ ಬಗೆ ಬಗೆಯ ವಿನ್ಯಾಸಗಳು ನೋಡುಗರ ಗಮನ ಸೆಳೆದವು.

ಭತ್ತ, ರಾಗಿ, ಜೋಳ, ಹುರುಳಿ ಕಾಳು, ನವಣೆ, ಕಡ್ಲೆಕಾಯಿ ಸೇರಿದಂತೆ ಏಳು ಬಗೆಯ ಧ್ಯಾನ್ಯಗಳನ್ನು ರಾಶಿ ಹಾಕಿ, ಅಲ್ಲಿ ಕಬ್ಬಿನ ಜಲ್ಲೆಗಳನ್ನು ನಿಲ್ಲಿಸುವ ಮೂಲಕ ಸುಗ್ಗಿ ಸಂಭ್ರಮದ ಆಚರಣೆಯೂ ಕಳೆಗಟ್ಟುವಂತೆ ಮಾಡಲಾಗಿತ್ತು. ಹಾಗೆಯೇ ಬಿಎಡ್‌ ಅಂತಿಮ ವರ್ಷ ಪೂರ್ಣಗೊಂಡು, ವಿದ್ಯಾಲಯದಿಂದ ಹೊರಟಿದ್ದ ಎಲ್ಲಾ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಬಣ್ಣ ಬಣ್ಣಗಳ ಹಾಳೆ ಮೇಲೆ ಅಂಟಿಸುವ ಮೂಲಕ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು.

ಬೆಳಗ್ಗೆ ನಡೆದ ಸುಗ್ಗಿ ಸಂಭ್ರಮ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್.‌ ಸೆಲ್ವಮಣಿ ಪಾಲ್ಗೊಂಡರು. ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದ ನಂತರ ದೀಪ ಬೆಳಗಿಸುವ ಮೂಲಕ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಣದಲ್ಲಿ ಗುರುಗಳ ಪಾತ್ರ ಅತಿ ಮುಖ್ಯ ತಂದೆ ತಾಯಿ ಮತ್ತು ಗುರುಗಳಿಗೆ ವಿಶೇಷ ಗೌರವ ನೀಡಬೇಕು ಮತ್ತು ನಿಮ್ಮ ನಡವಳಿಕೆಯನ್ನು ಶಿಷ್ಯ ಸಮೂಹ ಗಮನಿಸಿತ್ತಿರುತ್ತದೆ. ನಿಮ್ಮನ್ನು ಅನುಕರಣೆ ಮಾಡುತ್ತಿರುತ್ತಾರೆ. ಆದ್ದರಿಂದ ಶಿಕ್ಷಕರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಿ.ಎಡ್., ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾಗಿ ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಕೊಡುಗೆ ಸಲ್ಲಿಸುವ ವಿದ್ಯಾರ್ಥಿಗಳನ್ನು ತಯಾರು ಮಾಡುವವರು. ಅವರು ಸದಾ ಕ್ರೀಯಾಶೀಲರಾಗಿರಬೇಕು. ಹೊಸತನ್ನು ಕಲಿತು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಜೊತೆಗೆ ತಮ್ಮ ವಿದ್ಯಾರ್ಥಿಗಳಿಗೂ ಭೋಽಸಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಬಿ.ಆದಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕವಿತಾ ಸುಧೀಂದ್ರ, ಸರಿಗಮಪ ಖ್ಯಾತಿಯ ವಿಶಾಖ್ ನಗಲಾಪುರ್, ಪ್ರಾಂಶುಪಾಲ ಡಾ. ಮಧು, ಒಕ್ಕಲಿಗರ ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.
ಮಧ್ಯಾಹ್ನ ವಿದ್ಯಾರ್ಥಿಗಳ ಹಳ್ಳಿಯ ಸೊಗಡಿನ ಸವಿಬೋಜನ ಸವವಿದರು. ಸಂಜೆ ಡೊಳ್ಳು ಕುಣಿತ, ಜಟಕಾ ಗಾಡಿ, ಜಾನಪದ ತಂಡಗಳ ಮೂಲಕ ಕಾಲೇಜು ಆವರಣದಿಂದ ಗೋಪಿ ವೃತ್ತದ ವರೆಗೂ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆತೊಡುಗೆಗಳನ್ನು ತೊಟ್ಟು ಸಂಭ್ರಮಿಸಿದರು.

– ಡಾ. ಆರ್. ಸೆಲ್ವಮಣಿ, ಜಿಲ್ಲಾಧಿಕಾರಿ

Dc

ಹಿಂದೆ ಬ್ಲಾಕ್ ಬೋರ್ಡ್ ಮತ್ತು ಡೆಸ್ಕ್ ಸೀಮಿತವಾಗಿ ಶಿಕ್ಷಕರು ಹೇಳಿದ್ದೆ ಅಂತಿಮ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದರು. ಆದರೆ, ಈಗ ಆನ್‌ಲೈನ್ ಪ್ರಂಪಚ, ಯೂಟ್ಯೂಬ್ ಮತ್ತು ಫೆಸ್ ಬುಕ್‌ಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಿರುವ ಈ ಕಾಲದಲ್ಲಿ ಆಧುನಿಕತೆಗೆ ತಕ್ಕಹಾಗೆ ವಿವಿಧ ವಿಷಯಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಾದ ಅಗತ್ಯವಿದೆ.ಮಕ್ಕಳಲ್ಲಿ ಏಕಾಗ್ರತೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.

ಕಾವ್ಯ, ಬಿಎಡ್‌ ಅಂತಿಮ ವರ್ಷದ ವಿದ್ಯಾರ್ಥಿನಿ

ಎಲ್ಲೋ ಒಂದು ಕಡೆ ನಾವು ನಾಗರೀಕರಣ ಹಾಗೂ ಆಧುನೀಕರಣಕ್ಕೆ ಸಿಲುಕಿ ನಮ್ಮ ಶೇಷ್ಟ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ ಎನ್ನುವ ಆತಂಕ ಇದೆ. ಇಂತಹ ಸಂದರ್ಭದಲ್ಲಿ ನಾವು, ನಮ್ಮ ಸಂಸ್ಕೃತಿಯನ್ನು ಮತ್ತೆ ಮತ್ತೆ ಪರಿಚಯಿಸುವ, ಅದನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾಲೇಜಿನಲ್ಲಿ ಸುಗ್ಗಿ ಸಂಭ್ರಮ ಎನ್ನುವ ಈ ಅದ್ಬುತ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ವಿದ್ಯಾರ್ಥಿನಿ ಕಾವ್ಯ ತಿಳಿಸಿದ್ದಾರೆ.

– ಅನಿಲ್‌ ಕುಮಾರ್‌, ಪ್ರಥಮ ವರ್ಷದ ಬಿಎಡ್‌

ಹಿಂದೆ ನಮ್ಮ ಹಳ್ಳಿಯಲ್ಲಿ ಸುಗ್ಗಿ ಸಂಭ್ರಮ ತುಂಬಾನೆ ಜೋರಾಗಿರುತ್ತಿತ್ತು. ಎತ್ತುಗಳ ಮೆರವಣಿಗೆ ನಡೆಯುತ್ತಿತ್ತು. ಎಲ್ಲರೂ ಸಂಭ್ರಮದಲ್ಲಿಯೇ ಪಾಲ್ಗೊಳ್ಳುತ್ತಿದ್ದರು.ಆದರೆ ಈಗ ಕೃಷಿಯ ಲ್ಲಿಆಧುನೀಕ ರಣಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸುಗ್ಗಿ ಹಬ್ಬ ಎನ್ನುವುದು ಸಣ್ಣ ಖುಷಿಗೆ ಮಾತ್ರವೇ ಸಿಮೀತವಾಗಿದೆ. ಆದರೆ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ನಾವು ಇಂತಹ ಹಬ್ಬಗಳನ್ನು ಆಚರಿಸುವ ಅನಿವಾರ್ಯುತೆ ಇದೆ. ಆ ಕಾರಣಕ್ಕಾಗಿಯೇ ಇಲ್ಲಿ ಸುಗ್ಗಿ ಸಂಭ್ರಮ ಆಯೋಜಿಸಿದ್ದೇವೆ ಎಂದು ವಿದ್ಯಾರ್ಥಿ ಅನಿಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಶಿಲ್ಪಾ, ಕಾಲೇಜಿನ ಶಿಕ್ಷಕಿ

ಸಾಮಾನ್ಯವಾಗಿ ಸುಗ್ಗಿ ಸಂಭ್ರಮ ಸಂಕ್ರಾತಿಯಂದೇ ನಡೆಯುತ್ತದೆ. ಆದರೆ ನಮ್ಮ ಕಾಲೇಜಿನಲ್ಲಿ ಸಂಕ್ರಾಂತಿ ನಂತರವೇ ಆಚರಿಸುವುದು ಮಾಮೂಲು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಚರಿಸಲಾಗುತ್ತದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಸುಗ್ಗಿ ಹಾಡುಗಳ ಜತೆಗೆ ಸಿನಿಮಾ ಹಾಡುಗಳು ಇರುತ್ತವೆ.ಇದರ ಜತೆಗೆ ಮಧ್ಯಾಹ್ನ ಅಂತಿಮ ವರ್ಷದ ಬಿಎಡ್‌ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮ ಇರುತ್ತದೆ. ಇದನ್ನ ನಾವು ದೀಪದಾನ ಎಂದು ಕರೆಯುತ್ತವೆ ಎಂದು ಶಿಕ್ಷಕಿ ಶಿಲ್ಪಾ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/7065

Related Articles

Leave a Reply

Your email address will not be published. Required fields are marked *

Back to top button