ನಮ್ಮಪ್ಪ ಕೆರಿಯಪ್ಪ, ನಾನು ಚೀಫ್ ಮಿನಿಸ್ಟರ್ ನ ಮಗ ಅಲ್ಲ-ಆರಗರನ್ನ ಬಸವಣ್ಣನಿಗೆ ಹೋಲಿಸಿ ಮಾತನಾಡಿದ ಬಗ್ಗೆ ವಿವರಕೊಟ್ಟ ಬೇಳೂರು!

ಸುದ್ದಿಲೈವ್/ಶಿವಮೊಗ್ಗ:

ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಐದು ವರ್ಷ ನಿರಾತಂಕವಾಗಿ ಸರ್ಕಾರ ಇರುತ್ತದೆ. ಸಿಎಂ ಹಾಗೂ ಡಿಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಐದು ತಿಂಗಳಿನಲ್ಲಿ ಎಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಕಾಲಾವಕಾಶ ಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯವರಿಗೆ, ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದಿರುವುದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.
ತಾಕತ್ತು ಧಂ ಇದ್ರೆ ಉರುಳಿಸಿ ನೋಡೋಣ
ಸರ್ಕಾರ ಬಂದು ಕೇವಲ ಐದು ತಿಂಗಳು ಆಗಿದೆ. ಸರ್ಕಾರ ಉರುಳಿ ಹೋಗುತ್ತೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಉರುಳಿ ಹೋಗಲು ಸಾಧ್ಯವಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ ನಿಮಗೆ ತಾಕತ್ ಧಂ ಇದ್ರೆ ಉರುಳಿಸಿ ನೋಡೋಣ. ಆಪರೇಷನ್ ಕಮಲ ಮಾಡಲು ಹೊರಟಿರುವವರ ಬಗ್ಗೆ ನಾನ್ ಹೇಳೋದಿಷ್ಟೇ, ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಿ.
ಆ ರಮೇಶ್ ಜಾರಕಿಹೊಳಿ, ಸಿನಿಮಾ ನಟ ಸಿಪಿ ಯೋಗೀಶ್ವರ್ ಅಂಥವರು ಒಂದೆರಡು ಜನ ಸೇರಿಕೊಂಡು ಆಪರೇಷನ್ ಕಮಲ ಅಂತ ಹೊರಟಿದ್ದಾರೆ. ಅಂದು ಯಡಿಯೂರಪ್ಪ ಹಾಗೂ ಅವರ ಮಗ ಬಿವೈ ವಿಜಯೇಂದ್ರ ಹಡಬೆ ದುಡ್ಡಿತ್ತು ಆಪರೇಷನ್ ಕಮಲ ಮಾಡಿದರು. ಹಣ ಕೊಟ್ಟು 17 ಜನರನ್ನು ಖರೀದಿ ಮಾಡಿದರು. ಈಗ ಇಷ್ಟು ಜನರನ್ನು ಖರೀದಿ ಮಾಡಲು ಸಾಧ್ಯನಾ..? ಆ ತಾಕತ್ ಇದೆಯಾ..? ಅಂತವರು ಯಾರಿದ್ದಾರೆ..? ಅಂತಹ ವಾತಾವರಣ ಈಗ ಇಲ್ಲ. ನನಗೆ ಗೊತ್ತಿರುವ ಹಾಗೆ ನಮ್ಮ ಎಂಎಲ್ಎಗಳು ಹೋಗುವ ಪರಿಸ್ಥಿತಿ ಇಲ್ಲ ಎಂದರು.
ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿದೆ
ರಮೇಶ್ ಜಾರಕಿಹೊಳಿ ರಾಷ್ಟ್ರಪತಿ ಆಡಳಿತ ತರುತ್ತೇವೆ ಎಂದು ಹೇಳಿದ್ದಾರೆ. ಯಾವ ತರಹದ ರಾಷ್ಟ್ರಪತಿ ಆಡಳಿತ ತರ್ತಾರೆ.? ಯಾವ ಉದ್ದೇಶದಿಂದ ತರುತ್ತೀರಿ.? ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿರಬೇಕು. ಹುಚ್ಚರೆಲ್ಲ ಹೀಗೆ ಮಾಡುವುದು. ಅವರಿಗೆ ನೆಲೆ ಇಲ್ಲ, ಪಕ್ಷದಲ್ಲಿ ಬೆಲೆ ಇಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಅವರ ಎಲ್ಲಾ ಪ್ರಕರಣಗಳು ಮುನ್ನೆಲೆಗೆ ಬರಲಿವೆ. ಹಾಗಾಗಿ ಕಾಂಗ್ರೆಸ್ ಭಯ ಅವರಿಗೆ ಕಾಡುತ್ತಿದೆ. ಅದರ ಜೊತೆಗೆ ಈಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒಬ್ಬರು ಸೇರಿಕೊಂಡು ಬಿಟ್ಟಿದ್ದಾರೆ. ಅವೆಲ್ಲ ನಡೆಯೋದಿಲ್ಲ ಎಂದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೊರಗಿರೋದು ನಿಜ
ಸಂಘಟನಾತ್ಮಕವಾಗಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೊರಗಿದೆ ಎಂದು ಗೋಪಾಲಕೃಷ್ಣ ಒಪ್ಪಿಕೊಂಡರು. ಚುನಾವಣೆ ನಂತರ ನಮ್ಮ ಸಂಘಟನೆ ಕಡಿಮೆಯಾಗಿದೆ. ನಾವು ಇದನ್ನು ಗಟ್ಟಿ ಮಾಡಬೇಕಿದೆ. ಶಿವಮೊಗ್ಗ ಎಂಪಿ ರಾಘವೇಂದ್ರ ಈಗಾಗಲೇ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ.
ರಾಘವೇಂದ್ರ, ನಾಲ್ಕು ಮುಕ್ಕಾಲು ವರ್ಷಕ್ಕೆ ಮಾತ್ರ ಹಳ್ಳಿಗಳನ್ನು ಭೇಟಿ ನೀಡುವುದು. ಅಲ್ಲಿವರೆಗೆ ಅವರು ಯಾವುದೇ ಹಳ್ಳಿ ತಿರುಗುವುದಿಲ್ಲ. ಚುನಾವಣೆ ಎದುರಿಟ್ಟುಕೊಂಡು ಕ್ಯಾಂಪೇನ್ ಮಾಡಲು ಆರಂಭಿಸಿದ್ದಾರೆ. ಅಲ್ಲಲ್ಲೇ ಸಭೆ ಮಾಡುವುದು, ಟವರ್ ನಿರ್ಮಾಣ ಸಭೆ, ರಸ್ತೆಗಳ ವೀಕ್ಷಣೆ ಮಾಡುವುದು ಮಾಡುತ್ತಿದ್ದಾರೆ. ಇಷ್ಟು ವರ್ಷ ಎಂಪಿ ರಾಘವೇಂದ್ರ ಏನು ಮಾಡುತ್ತಿದ್ದರು.?
ನಾನ್ ಅಷ್ಟು ಅನುದಾನ ತಂದೆ ಇಷ್ಟ ಅನುದಾನ ತಂದೆ, ಏರ್ಪೋರ್ಟ್ ತಂದೆ ಅಂತ ಹೇಳಿಕೊಂಡು ಓಡಾಡುತ್ತಾರೆ. ಶಿವಮೊಗ್ಗ ಏರ್ಪೋರ್ಟ್ ತಂದವರು ಯಾರು? ಏರ್ಪೋರ್ಟ್ ತಂದಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ರಾಜ್ಯ ಸರ್ಕಾರದ ಹಣ ಅಲ್ವ ಅದು.? ಯಾವುದೇ ಸರ್ಕಾರ ಆದ್ರೂ ಏರ್ಪೋರ್ಟ್ ಮಾಡೋದಿಲ್ವಾ.? ನಮ್ಮ ಸರ್ಕಾರ ಹಲವು ಕಡೆ ಮಾಡಿದೆ. ಲೋಕಸಭಾ ಚುನಾವಣೆ ಬರುವ ಹೊತ್ತಿಗೆ ನಾವು ನಮ್ಮ ಅಭಿವೃದ್ಧಿಯನ್ನು ತೋರಿಸಿ ಸಂಘಟನೆ ಬಲಪಡಿಸಿಕೊಳ್ಳಬೇಕಿದೆ ಎಂದರು.
ಬೇಳೂರಿಗೆ ಮಂಡಳಿ-ಮಂತ್ರಿ ಸ್ಥಾನಮನ ಬೇಕಿತ್ತಾ?
ಸಂಘಟನಾ ದೃಷ್ಟಿಯಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಮಂತ್ರಿ ಅಥವಾ ನಿಗಮ ಮಂಡಳಿ ಸ್ಥಾನ ನೀಡಿದರೆ ಅನುಕೂಲವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನೇನು ಈತನಕ ಮಂತ್ರಿ ಪದವಿ ಕೇಳಿಲ್ಲ ಎಂದರು. ಮಧು ಬಂಗಾರಪ್ಪನವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ನಾವು ಖುಷಿಯಿಂದ ಕೆಲಸ ಮಾಡುತ್ತೇವೆ ಎಂದರು.
ಬಿವೈ ರಾಘವೇಂದ್ರ ಅಂದರೆ ಯಾರು ಕೇಳುತ್ತಾರೆ.? ಅಲ್ಲಿ ಯಡಿಯೂರಪ್ಪ ಹೆಸರು ಸೇರುತ್ತೆ. ಬರೀ ರಾಘವೇಂದ್ರ ಅಂತ ಬಂದರೆ ಏನು ನಡೆಯುವುದಿಲ್ಲ. ಯಡಿಯೂರಪ್ಪ ಹೆಸರಿ ನಿಂದ ಮಾತ್ರ ಅವರು ಪ್ರಚಾರಕ್ಕೆ ಬಂದಿರೋದು.
ನಾನು ಕೆರಿಯಪ್ಪನ ಮಗ ಅವಕಾಶ ಕಡಿಮೆ
ನಾನು ಕೆರಿಯಪ್ಪನ ಮಗ, ನಮ್ಮಪ್ಪ ಚೀಫ್ ಮಿನಿಸ್ಟರ್ ಆಗಿರಲಿಲ್ಲ. ಮಂತ್ರಿನೂ ಆಗಿರಲಿಲ್ಲ ಹಾಗಾಗಿ ನಾವು ಅವರಷ್ಟು ಮಟ್ಟಕ್ಕೆ ಬೆಳೆಯಲು ಸಾಧ್ಯ ಆಗಿಲ್ಲ ನಾನು ಮೂರು ಬಾರಿ ಶಾಸಕನಾಗಿಯೂ ಕೂಡ ಇಲ್ಲೇ ಇದ್ದೇನೆ. ಅಧಿಕಾರ ಕೊಟ್ಟಿದ್ದಾರೆ ನಡೆಸಬೇಕು. ಮುಂದಿನ ಚುನಾವಣೆ ಒಳಗೆ ನಾವು ಸಶಕ್ತವಾಗಿ ಪಕ್ಷವನ್ನು ಕಟ್ಟಬೇಕು. ಚುನಾವಣೆ ಗೆಲ್ಲಬೇಕು. ಎಂಪಿ ಚುನಾವಣೆ ನಾನು ನಿಲ್ಲುತ್ತೇನೆ ಅಂತ ಹೇಳಿದ್ದೇನೆ. ನಾನು ಮೇಲೆ ಬೆಳೆಯಬೇಕು ಅನ್ನೋದು ನನ್ನ ನಿರ್ಧಾರವೇ ಹೊರತು ದಿಢೀರ್ ಹೇಳಿಕೆ ಅಲ್ಲ ಎಂದರು.
ಒಂದು ವೇಳೆ ಕುಮಾರ್ ಬಂಗಾರಪ್ಪನವರು ಬಂದು ಆಕಾಂಕ್ಷಿ ಆದರೂ ನನಗೂ ಅದಕ್ಕೂ ಸಂಬಂಧ ಇಲ್ಲ. ಈ ತನಕ ಅವರು ನಮ್ಮ ಪಕ್ಷವನ್ನ ಸಂಪರ್ಕಿಸಿ ಮಾತುಕತೆ ನಡೆಸಿರೋದು ನನಗೆ ಗೊತ್ತಿಲ್ಲ. ನಾನು ಆಕಾಂಕ್ಷಿ ಅಷ್ಟೇ, ರೇಸಲ್ಲಿ ನಾನೊಬ್ಬನೇ ಇರೋದು ಎಂದರು. ಕುಮಾರ್ ಬಂಗಾರಪ್ಪ ಅವರಿಗೆ ಯಾಕೆ ಅವಕಾಶ ಕೊಡಬೇಕು.? ಅವರೇನು ಪಕ್ಷ ಸಂಘಟನೆ ಮಾಡಿದ್ದಾರಾ.? ಪಕ್ಷ ಸಂಘಟನೆ ಯಾರು ಮಾಡಿದ್ದರು.? ಅವರಿಗೆ ಅವಕಾಶ ಕೊಡಿ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಬೇಳೂರು ಎಂದರೆ ಯಾರಿಗೆ ಗೊತ್ತಿಲ್ಲ.? ಬೇಳೂರು ಅಂದ್ರೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಅನುದಾನ ಬರುತ್ತೆ, ಗ್ಯಾರಂಟಿಗೆ ವಿಳಂಭವಾಗಿದೆ
ಕ್ಷೇತ್ರಕ್ಕೆ ಅನುದಾನ ಬರುತ್ತೆ. ಈ ಸಲ ಗ್ಯಾರಂಟಿ ಯೋಜನೆಗಳನ್ನು ಹಾಕಿಕೊಂಡಿರುವುದರಿಂದ 32,000 ಕೋಟಿ ರೂಪಾಯಿಯನ್ನು ಜನರಿಗೆ ಕೊಟ್ಟಿದ್ದೇವೆ. ಅದು ಕೂಡ ಅಭಿವೃದ್ಧಿ ಪರ ಘೋಷಣೆಯೇ ಆಗಿದೆ. ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಜೆಪಿಯವರು ಏಕ್ದಂ ಅಭಿವೃದ್ಧಿ ಮಾಡಿಬಿಟ್ರಾ.? ಕಳೆದ ರಾಜ್ಯ ಸರ್ಕಾರ ಇದ್ದಾಗಲೂ ಕೂಡ ಕೊನೆ ದಿನಗಳಲ್ಲಿ ಅಭಿವೃದ್ಧಿ ಅಂದ್ರು. ಒಂದು ಬಗರ್ ಹುಕುಂ ಹಕ್ಕುಪತ್ರ ಕೊಟ್ಟಿಲ್ಲ. ಆಶ್ರಯ ಮನೆನೂ ಇಲ್ಲ ಎಂದರು.
ರಾಘವೇಂದ್ರನ ಅಧಿಕಾರಿಗಳು ತೊಲಗಿದರೆ ಅಭಿವೃದ್ಧಿ ಸಾಧ್ಯ
ಎಂಪಿ ರಾಘವೇಂದ್ರ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಇಟ್ಟುಕೊಂಡರೆ ನೀವು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಇನ್ನೊಂದಿಷ್ಟು ಜನ ಇದ್ದಾರೆ ಅವರನ್ನು ತೆಗೆಯಬೇಕು. ಅವರನ್ನು ಯಾಕೆ ಇಟ್ಟುಕೊಳ್ಳಬೇಕು.? ರಾಘವೇಂದ್ರ ಹೇಳಿದ ಹಾಗೆ ಕೇಳುತ್ತಾರೆ. ಐದು ವರ್ಷ ತಿಂದು, ಮೇಯ್ದು, ಜಿಡ್ಡು ಹಿಡಿದು ಕೂತಿದ್ದಾರೆ. ಅವರನ್ನೇಕೆ ಇಟ್ಟುಕೊಳ್ಳಬೇಕು.? ಮಧು ಬಂಗಾರಪ್ಪ ಅವರ ಶಿಫಾರಸು ಪತ್ರಗಳು ನನಗೆ ಗೊತ್ತಿಲ್ಲ. ಹೊಸ ಅಧಿಕಾರಿ ಹಾಕಿ ಕೆಲಸ ಮಾಡಿಸಿಕೊಳ್ಳಿ ಅಷ್ಟೇ ಅಂತಷ್ಟೇ ನಾನು ಹೇಳುತ್ತೇನೆ. ಸರಕಾರಕ್ಕೆ ಕೇಳುತ್ತೇನೆಯೇ ಹೊರತು ಮಧು ಬಂಗಾರಪ್ಪನ ಕೇಳುವ ಪ್ರಶ್ನೆಯೇ ಇಲ್ಲ ಎಂದರು.
ನಾನು ಬಿಜೆಪಿ ಹೊಗಳಿಲ್ಲ, ಸಿಗಂದೂರು ಸೇತುವೆ ಬಗ್ಗೆ ಮೆಚ್ಚುಗೆ
ನಾನು ಕೇಂದ್ರದ ಬಿಜೆಪಿ ಸರ್ಕಾರವನ್ನು ಹೊಗಳಿಲ್ಲ. ಬ್ಯಾಕೋಡ್ ತುಮರಿ ಸೇತುವೆ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಆರಗ ಜ್ಞಾನೇಂದ್ರ ಅಂದ್ರೆ ಬಸವಣ್ಣ ಇದ್ದಹಾಗೆ ಅಂತ ಹೇಳಿದ್ದು ನಿಜ. ಅದು ಹೊಗಳಿದಂತಲ್ಲ. ಆರಗ ಒದೆಯೋದಿಲ್ಲ, ಹಾಯೋದಿಲ್ಲ ಅಂತ ಹೇಳುವ ಅರ್ಥದಲ್ಲಿ ಹೇಳಿದ್ದೇನೆ.
ರಾಷ್ಟ್ರೀಯ ಹೆದ್ದಾರಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. 20 ವರ್ಷ ಬೇಕಾ ಒಂದು ರಾಷ್ಟ್ರೀಯ ಹೆದ್ದಾರಿ ಮಾಡೋದಕ್ಕೆ.? ರಾಷ್ಟ್ರೀಯ ಹೆದ್ದಾರಿಗಳು ಮಿಂಚುತ್ತವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಎಲ್ಲಿವೆ ಹೆದ್ದಾರಿಗಳು.? ಯಡಿಯೂರಪ್ಪ ಹೊಗಳಿದ್ದು ಕೂಡ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ. ಬಿಜೆಪಿ ಬಯ್ಯೋದೇ ನನ್ನ ಕೆಲಸ, ನಾನ್ಯಾಕೆ ಅವರನ್ನು ಹೊಗಳಲಿ ಎಂದರು.
ಇದನ್ನೂ ಓದಿ-https://suddilive.in/archives/2244
