ರಾಜಕೀಯ ಸುದ್ದಿಗಳು

ಮತ್ತೊಂದು ಬದಲಾವಣೆಗೆ ಬಿಜೆಪಿ ಕೈ ಹಾಕುತ್ತಾ?

ಸುದ್ದಿಲೈವ್/ಶಿವಮೊಗ್ಗ

ಮತ್ತೊಂದು ಬದಲಾವಣೆಗೆ ಬಿಜೆಪಿ ಕೈ ಹಾಕುತ್ತಾ? ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದ ರಾಘವೇಂದ್ರರನ್ನ ಬದಲಿಸಿ ಈಡಿಗ ಸಮುದಾಯದ ಕುಮಾರ್ ಬಂಗಾರಪ್ಪರಿಗೆ ಬಿಜೆಪಿ ಟಿಕೇಟ್ ನೀಡಿ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತಾ? ಅಥವಾ ಕುಮಾರ್ ಬಂಗಾರಪ್ಪನವರೇ ಕಾಂಗ್ರೆಸ್ ಗೆ ಹೋಗಿ ಬಿಜೆಪಿಗೆ ಟೈಟ್ ಫೈಟ್ ಕೊಡ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ತರುವುದಾಗಿ ಹೇಳಿ 72 ಜನ ಹೊಸ ಮುಖಕ್ಕೆ ಮಣೆಹಾಕಿ ಚುನಾವಣೆ ನಡೆಸಿತ್ತು. ಆದರೆ ಬಿಜೆಪಿಯ ಈ ಹೊಸ ಬದಲಾವಣೆಗೆ ಜನ ಮಣೆಹಾಕದೆ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲವು ದೊರೆತಿತ್ತು. 72 ಹೊಸ ಮುಖದಲ್ಲಿ 14 ಜನ ಮಾತ್ರ ಗೆದ್ದಿದ್ದು ಬಿಜೆಪಿಗೆ ಮುಖಭಂಗವಾಗಿತ್ತು. ಆದರೆ ಶಿವಮೊಗ್ಗದ 7 ವಿಧಾನ ಸಭಾ ಕ್ಷೇತ್ರದಲ್ಲಿ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರವನ್ನ ಪ್ರಯೋಗಾಲಯವನ್ನಾಗಿ ಮಾಡಿಕೊಳ್ಳಲಾಗಿತ್ತು.

ಆದರೆ ಶಿವಮೊಗ್ಗದ ವಿಧಾನ ಸಭಾ ಕ್ಷೇತ್ರದಿಂದ‌ ಹೊಸಮುಖದಿಂದ ಚೆನ್ನಬಸಪ್ಪ  ಗೆದ್ದು ಬಂದಿದ್ದರು. ವಿಧಾನ ಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ ಯಡಿಯೂರಪ್ಪನವರನ್ನ ಮೂಲೆಗುಂಪು ಮಾಡಿದ್ದರ ಪರಿಣಾಮ ಸೋಲುಂಡಿದೆ ಎಂಬ ಟೀಕೆಯೂ ಕೇಳಿ ಬಂದಿತ್ತು. ಆದರೆ ಬಿಜೆಪಿ ಆಡಳಿತ ವಿರೋಧಿ ಅಲೆ ಇಟ್ಟುಕೊಂಡು ಹೊಸ ಪ್ರಯೋಗ ಮಾಡಿದರೆ ಗೆದ್ದು ಬರುವುದು ಕಷ್ಟ ಎಂಬ ಮಾತನ್ನ ಯಾರು ಆಡದೆ  ವಿಪರ್ಯಾಸ.

ಏನೇ ಇರಲಿ, ಈಗ ಲೋಕಸಭಾ ಚುನಾವಣೆಗೆ ಇನ್ನೂ ಅಖಾಡ ಗಟ್ಟಿಯಾಗಿಲ್ಲ. ಈ ಬಾರಿ ಯಡಿಯೂರಪ್ಪನವರ ಕುಟುಂಬದ ಸದಸ್ಯರನ್ನ ಹೊರಗಿಟ್ಟು ಬಿಜೆಪಿ ಮತ್ತೊಬ್ಬ ಹೊಸಮುಖವನ್ನ ಪರಿಚಯಿಸುವ ದುಸ್ಸಾಹಸಕ್ಕೆ ಬಿಜೆಪಿ ಇಳಿಯಲಿದೆ ಎಂಬ ಮಾತುಗಳಲ್ಲಿ ತಿರುಳಿಲ್ಲ. ಆದರೆ 2023 ರಲ್ಲಿ ಕಾಂಗ್ರೆಸ್ ನ ಮಧು ಬಂಗಾರಪ್ಪ ತಮ್ಮ ಪ್ರತಿಸ್ಪರ್ಧಿ ಕುಮಾರ್ ಬಂಗಾರಪ್ಪನವರ ಎದುರು ಗೆದ್ದ ಅಂತರ ಇಂತಹ ಚರ್ಚೆಗೆ ಕಾರಣವಾಗಿದೆ.

ಮಾಜಿ ಸಚಿವ ಕುಮಾರ ಬಂಗಾರಪ್ಪನವರು ಚುನಾವಣೆ ಸೋತ ನಂತರ ಸಾರ್ವಜನಿಕರವಾಗಿ ಕಾಣಿಸಿಕೊಳ್ಳುವುದೇ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಪೇಜ್ ನಲ್ಲಿ ಹೊರಡುವ ಶುಭಾಶಯಗಳು, ಮೆಚ್ಚುಗೆಗಳಲ್ಲಿ ಬಿಜೆಪಿಯ ಲೋಗೋ ಸಹ ಇಲ್ಲದೆ ಪೋಸ್ಟ್ ಆಗುತ್ತಿರುವುದರಿಂದ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಅಲ್ಲದೆ ಡಿಸಿಎಂ ಮತ್ತು ಸಿದ್ದರಾಮಯ್ಯನವರನ್ನ ಭೇಟಿಯಾಗಿರುವುದು ಸಹ ಕಾಂಗ್ರೆಸ್ ಸೇರ್ಪಡೆಯ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿವೆ.

ಕುಮಾರ ಬಂಗಾರಪ್ಪ ಎಲ್ಲೂ ಬಹಿರಂಗವಾಗಿ ತಾವು ಬಿಜೆಪಿ ಬಿಡ್ತೀನಿ ಅಥವಾ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈಗಲೂ ಸಹ ಅವರು ಲೋಕಸಭಾ ಚುನಾವಣೆಯ ಆಕಾಂಕ್ಷಿ ಎಂದು ಬಹಿರಂಗ ಪಡಿಸಲಿಲ್ಲ. ಆದರೆ ಸಾಮಾಜಿಕ ಜಾಲತಾಲದಲ್ಲಿ ಅವರದೇ ಸಮುದಾಯದ ಪೇಜ್ ವೊಂದರಿಂದ ಈ ಪೋಸ್ಟ್ ಈ ಎಲ್ಲಾ ಚರ್ಚೆಗೆ ಕಾರಣವಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀಯುತ ಕುಮಾರ್ ಬಂಗಾರಪ್ಪನವರು ಸ್ಪರ್ದಿಸಬೇಕು. ಎನ್ನುವುದು ಶಿವಮೊಗ್ಗ ಜನರ ಬಯಕೆ..  ಸದಾ ಜನಪರ ಕಾಳಜಿ, ಅಭಿರುದ್ಧಿಗಾಗಿ ಶ್ರಮಿಸುವ ನಿಮ್ಮ ಸೇವೆ ಶಿವಮೊಗ್ಗ ಜನತೆಗೆ ಬೇಕಾಗಿದೆ. ಯಾವ ಪಕ್ಷವಾದರೂ  ನಿಮ್ಮನ್ನ ನಾವು ಬೆಂಬಲಿಸಲು ಸಿದ್ದರಿದ್ದೇವೆ ಎಂಬ ಪೋಸ್ಟ್ ಅವರ ಸ್ಪರ್ಧೆಗೆ ಹಲವು ಉತ್ತೇಜನ ದೊರೆಯುತ್ತಿದೆ

ಅದರಲ್ಲಿ ಕೆಲವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದರೆ ಗೆಲವು 100% ಎಂದು ಕಾಮೆಂಟ್ಸ್ ಮಾಡಿದರೆ ಇನ್ನು ಕೆಲವರು ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಬಿಜೆಪಿಯಲ್ಲಿ ಬಿಎಸ್ ವೈ ಪುತ್ರ ಇದ್ದಾರೆ ಯಾರು ಕೊಡ್ತಾರೆ ಕುಮಾರ್ ಗೆ ಟಿಕೇಟು ಎಂದು ಪ್ರಶ್ನಿಸಲಾಗಿದೆ. ಸಂಸದ ಬಿ.ವೈ‌.ರಾಘವೇಂದ್ರರಿಗೆ ಅವರದೇ ಪಕ್ಷದ ನಾಯಕ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಾರಾ ಎಂಬ ಚರ್ಚೆಗೂ ಈ ಪೋಸ್ಟ್ ಕಾರಣವಾಗಲಿದೆ.

ಲೋಕಸಭಾ ಚುನಾವಣೆಗೆ ಏಳು ತಿಂಗಳು ಉಳಿದಿದೆ. ಸಂಸದ ರಾಘವೇಂದ್ರ ನಿಧಾನವಾಗಿ ಹಲವೆಡೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಲವು ಕಾಮಗಾರಿಯನ್ನ ತಂದು ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಆದರೆ ಈಡಿಗ ಸಮುದಾಯ ಕುಮಾರ್ ಬಂಗಾರಪ್ಪನವರಿಗೆ ಬಿಜೆಪಿ ಟಿಕೇಟ್ ಕೊಟ್ಟರೆ ಗೆಲವು ಗ್ಯಾರೆಂಟಿ ಎಂಬ ಮಾತು ರಾಘವೇಂದ್ರರ ಮುಂದೆ ನಿಲ್ಲುತ್ತದಾ? ಮೊದಲೆ ಹೊಸಮುಖದ ಪ್ರಯೋಗ ನಡೆಸಿ ಮುಖಭಂಗಕ್ಕೆ ಒಳಗಾದ ಬಿಜೆಪಿ ಮತ್ತೊಮ್ನೆ ಇಂತಹ ಪ್ರಯೋಗಕ್ಕೆ ಕೈ ಹಾಕುತ್ತಾ ಎಂಬುದೇ ಕಾದು ನೋಡಬೇಕಿದೆ.

ಕಾಂಗ್ರೆಸ್ ಸಹ ಶಿವಮೊಗ್ಗದಲ್ಲಿ ತಮ್ಮ ಪ್ರಭಲ ಅಭ್ಯರ್ಥಿಯನ್ನ ಕಣಕ್ಕಿಳಿಸುವುದರಲ್ಲಿ ಬಂಗಾರಪ್ಪನವರ ನಂತರ ಕಳೆದುಕೊಂಡು ಬಿಟ್ಟಿದೆ. ಮಧು ಬಂಗಾರಪ್ಪನವರು ಒಮ್ಮೆ ಉಪಚುನಾವಣೆ ಮತ್ತು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇವರ ಸಹೋದರಿ ಗೀತಾರವರು ಬಿಎಸ್ ವೈ ವಿರುದ್ಧ ಭರ್ಜರಿ ಸೋಲುಂಡಿದ್ದಾರೆ.

ಆಗ ಮೋದಿ ಅಲೆಯಿತ್ತು ಎಂದು ಹೇಳಿದರೂ ಸಹ ಈ ಬಾರಿಯ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ನಿಂದ  ಕುಮಾರ್ ಬಂಗಾರಪ್ಪನವರು ಸ್ಪರ್ಧಿಸುವುದು ಹೊರತು ಪಡಿಸಿ ಬೇರೆ ಯಾರನ್ನೇ ಕಣಕ್ಕಿಳಿಸಿದರೂ ರಾಘವೇಂದ್ರರ ಅಭಿವೃದ್ಧಿಯ ಮಂತ್ರದ ಮುಂದೆ ಸೋಲು ಗ್ಯಾರೆಂಟಿ ಎಂಬ ಮಾತು ಕೇಳಿ ಬರುತ್ತಿದೆ. ಆದರೂ ಚುನಾವಣೆಗೆ ಏಳು ತಿಂಗಳು ಬಾಕಿ ಇದೆ. ಈಗಲೇ ಸೋಲುಗೆಲವಿನ ಲೆಕ್ಕಾಚಾರ ಆರಂಭವಾದರೂ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ-https://suddilive.in/archives/1671

Related Articles

Leave a Reply

Your email address will not be published. Required fields are marked *

Back to top button